ಬೆಂಗಳೂರು: ದಕ್ಷಿಣ ರಾಜ್ಯಗಳ ಬಡವರ ರಕ್ತ ಹೀರಿದ "ಅಗ್ರಿಗೋಲ್ಡ್" ವಂಚನೆ ಪ್ರಕರಣದಲ್ಲಿ ಮೋಸ ಹೋದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಸಂತ್ರಸ್ತರುಇರುವ ಕಾರಣ ವಂಚನೆ ಪ್ರಕರಣದ ವಿಚಾರಣೆಗೆ ನೋಡಲ್ ರಾಜ್ಯ ನ್ಯಾಯಾಲಯ ಸ್ಥಾಪನೆ ಮಾಡುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿರುವ ಸಂಗತಿ ಬೆಳಕಿಗೆ ಬಂದಿದೆ.
ಕರ್ನಾಟಕ ರಾಜ್ಯ ಸರ್ಕಾರದ ಮನವಿಯನ್ನು ಪುರಸ್ಕರಿಸಿ ಸುಪ್ರೀಂಕೋರ್ಟ್ ನೋಡಲ್ ರಾಜ್ಯ ನ್ಯಾಯಾಲಯ ಸಿಕ್ಕರೆ, ಪ್ರಮುಖವಾಗಿ ಕರ್ನಾಟಕ, ಅಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯದಲ್ಲಿ ನೋಡಲ್ ನ್ಯಾಯಾಲಯ ಸ್ಥಾಪನೆಯಾಗಲಿದೆ. ಅಗ್ರಿಗೋಲ್ಡ್‌ಗೆ ಸಂಬಂಧಿಸಿದ ಅಷ್ಟೂ ಅಂತರ ರಾಜ್ಯ ವಂಚನೆ ಪ್ರಕರಣಗಳನ್ನು ಈ ನ್ಯಾಯಾಲಯ ವಿಚಾರಣೆ ನಡೆಸಲಿದೆ. ಇದರಿಂದ ಎರಡು ದಶಕದಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಹೂಡಿಕೆದಾರರಿಗೆ ತ್ವರಿತ ನ್ಯಾಯ ಸಿಗಲಿದೆ. ಅಲ್ಲದೇ ಯಾವುದೇ ತಾರತಮ್ಯ ವಿಲ್ಲದೇ ಎಂಟು ರಾಜ್ಯಗಳಲ್ಲಿ ಮೋಸ ಹೋಗಿರುವ ಹೂಡಿಕೆದಾರರಿಗೆ ಸಮ ಪ್ರಮಾಣದ ಪರಿಹಾರ ಸಿಗಲಿದೆ.
ಭರವಸೆಯ ಬೆಳಕು : ಅಗ್ರಿಗೋಲ್ಡ್ ಗ್ರಾಹಕರು ಮತ್ತು ಎಜೆಂಟರ ಕಲ್ಯಾಣ ಒಕ್ಕೂಟ ಹೈಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ಸತೀಶ್ ಚಂದ್ರ ವರ್ಮಾ ನೇತೃತ್ವದ ಪೀಠ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಈ ಸಂಬಂಧ ಹೈಕೋರ್ಟ್ ಗೆ ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ, ಅಗ್ರಿಗೋಲ್ಡ್ ಬಹುಕೋಟಿ ವಂಚನೆ ಪ್ರಕರಣ ಹಲವು ರಾಜ್ಯಗಳಲ್ಲಿ ನಡೆದಿದೆ. ಹೀಗಾಗಿ ವಂಚನೆ ಪ್ರಕರಣಗಳನ್ನು ವಿಚಾರಣೆ ನಡೆಸಲು ವಿಶೇಷವಾಗಿ ನೋಡಲ್ ನ್ಯಾಯಾಲಯ ಸ್ಥಾಪನೆ ಮಾಡುವಂತೆ ಸುಪ್ರೀಂಕೋರ್ಟ್ ಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದೆ.
ಅಗ್ರಿಗೋಲ್ಡ್ ಅಕ್ರಮಕ್ಕೆ ಸಂಬಂಧಿಸಿದ ವಂಚನೆ ಪ್ರಕರಣಗಳು ವಿವಿಧ ರಾಜ್ಯಗಳ ವಿವಿಧ ನ್ಯಾಯಾಲಯಗಳಲ್ಲಿ ನಡೆಯುತ್ತಿವೆ. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಒರಿಸ್ಸಾ, ಮಾಲ್ಡೀವ್ಸ್, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ನಡೆಯುತ್ತಿದೆ. ಹೀಗಾಗಿ ಎಲ್ಲಾ ಪ್ರಕರಣಗಳ ತ್ವರಿತ ವಿಲೇವಾರಿಗೆ ನೋಡಲ್ ನ್ಯಾಯಾಲಯ ಅಗತ್ಯವಿದೆ. ಈ ಕುರಿತು ಸುಪ್ರೀಂಕೋರ್ಟ್‌ಗೆ ಮನವಿ ಮಾಡಲಾಗಿದೆ ಎಂದು ಸರ್ಕಾರಿ ಪರ ವಕೀಲರು ನೀಡಿದ ಹೇಳಿಕೆಯನ್ನು ಹೈಕೋರ್ಟ್ ದಾಖಲಿಸಿಕೊಂಡಿದೆ. ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.
ಅಗ್ರಿಗೋಲ್ಡ್ ವಂಚನೆ ಹಿನ್ನೆಲೆ
1995 ರಲ್ಲಿ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಅಗ್ರಿಗೋಲ್ಡ್ ಎಂಬ ಸಂಸ್ಥೆಯನ್ನು ಅವ್ವ ವೆಂಕಟರಾಮರಾವ್ ಮತ್ತು ಇತರರು ಸೇರಿ ಹುಟ್ಟು ಹಾಕಿದ್ದರು. ಮಾಸಿಕ ಹಣ ಹೂಡಿಕೆ ಮಾಡಿಸುವ ಸ್ಕೀಮ್‌ಗಳನ್ನು ಸಂಸ್ಥೆ ಪರಿಚಯಿಸಿತ್ತು. ಹೆಚ್ಚು ಬಡ್ಡಿ ಕೊಡುವ ಆಸೆ ಹುಟ್ಟಿಸಿದ್ದರಿಂದ ಲಕ್ಷಾಂತರ ಜನರು, ಅದರಲ್ಲೂ ಹಳ್ಳಿ ಪ್ರದೇಶದ ಜನರೇ ಹೂಡಿಕೆ ಮಾಡಿದ್ದರು. ಹಣ ಹೂಡಿಕೆ ಮಾಡಿದವರಿಗೆ ಕಮೀಷನ್ ಆಸೆ ತೋರಿಸಿ ಲಕ್ಷಾಂತರ ಜನರನ್ನು ಏಜೆಂಟರನ್ನಾಗಿ ನೇಮಿಸಿತು. ಇದ್ದಕ್ಕಿದ್ದಂತೆ ಕಂಪನಿಯಲ್ಲಿ ಹೂಡಿಕೆ ಮಾಡುವರ ಸಂಖ್ಯೆ ಲಕ್ಷಗಳು ದಾಟಿತು. ಇದೇ ಅವಧಿಯಲ್ಲಿ ಅಗ್ರಿಗೋಲ್ಡ್ ಸಂಸ್ಥೆ ರಿಯಲ್ ಎಸ್ಟೇಟ್, ಅಗ್ರಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿತು. ಅಗ್ರಿ ಫಾರ್ಮಿಂಗ್, ಅಗ್ರಿ ರೆಸಾರ್ಟ್ ಹೀಗೆ ದೇಶದ ಉದ್ದಗಲಕ್ಕೂ ಬಡವರ ಹಣದಲ್ಲಿ ನಾನಾ ವಹಿವಾಟು ಆರಂಭಿಸಿತ್ತು.
ಇದು ಜನರ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿತ್ತು. ಹೀಗಾಗಿ ಹೂಡಿಕೆ ಮಾಡುವ ಪ್ರಮಾಣ ದಿನೇ ದಿನೇ ಹೆಚ್ಚಾಗಿತ್ತು. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಒರಿಸ್ಸಾ, ಅಂಡಮಾನ್ ನಿಕೋಬಾರ್ ಸೇರಿದಂತೆ ಎಂಟು ರಾಜ್ಯದ ಜನರು ಹಣದಾಸೆಗೆ ಬಿದ್ದು ಹೂಡಿಕೆ ಮಾಡಿದ್ದರು. ಒಟ್ಟಾರೆ ಸಾರ್ವಜನಿಕರಿಂದ 1995 ರಿಂದ ಸಂಗ್ರಹಿಸಿದ್ದು 7 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಅದರ ಸರ್ಕಾರಿ ಬಡ್ಡಿ ಸೇರಿಸಿದರೂ ವಂಚನೆ ಮೊತ್ತ 20 ಸಾವಿರ ಕೋಟಿ ರೂ. ದಾಟುತ್ತದೆ. ಹಣ ದ್ವಿಗುಣಗೊಳಿಸುವ ಆಸೆ ಹುಟ್ಟಿಸಿ ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳಲ್ಲಿ 32 ಲಕ್ಷ ಮಂದಿಯಿಂದ ಬರೋಬ್ಬರಿ 7 ಸಾವಿರ ಕೋಟಿ ಮಾಡಿದ್ದು ವಿಜಯವಾಡ ಮೂಲದ ಅವ್ವ ವೆಂಕಟ ರಾಮ ರಾವ್ ಎಂಬ ಮಹಾ ವಂಚಕ.
ಎಂಟು ರಾಜ್ಯಗಳಲ್ಲಿ ತನಿಖೆ ಆರಂಭ
ಹಣ ಹೂಡಿದ್ದವರು ಹಣದಾಸೆಗೆ ಬಿದ್ದು ಹೂಡಿಕೆ ಮಾಡಿದ್ದ ಹಣದ ಮೆಚ್ಯುರಿಟಿಗೆ ಕೊಟ್ಟಿದ್ದ ಅವಧಿ ಮುಗಿತು ಹೋಗಿತ್ತು. 2012 ರಿಂದಲೇ ಅಗ್ರಿಗೋಲ್ಡ್ ನೀಡಿದ್ದ ಚೆಕ್‌ಗಳು ಬೌನ್ಸ್ ಆಗತೊಡಗಿತು. 2014 ರ ವೇಳೆಗೆ ಹಣ ಹೂಡಿಕೆ ಮಾಡಿದ್ದ ಜನರು ವಾಪಸು ಕೇಳಲು ಆರಂಭಿಸಿದರು. ಆಂಧ್ರ ಪ್ರದೇಶದ ವಿಜಯವಾಡದಲ್ಲಿದ್ದ ಕೇಂದ್ರ ಕಚೇರಿ ಮುಂದೆ ಲಕ್ಷಾಂತರ ಜನರು ಪ್ರತಿಭಟನೆ ನಡೆಸಿದರು. ಹಣವೂ ಇಲ್ಲ, ಬಡ್ಡಿಯೂ ಇಲ್ಲ, ಕೊಟ್ಟ ಚೆಕ್‌ಗಳು ಡಸ್ಟ್ ಬಿನ್ ಸೇರಿದವು. ಇಡೀ ದಕ್ಷಿಣ ರಾಜ್ಯದಲ್ಲಿ ಜನರು ಬೀದಿಗೆ ಬಿದ್ದರು. ಆಪ್ತರಿಂದ ನಂಬಿಕಸ್ತರಿಂದ ಹೂಡಿಕೆ ಮಾಡಿಸಿದ್ದವರು ನೇಣುಗಂಬ ಏರಿ ಆತ್ಮಹತ್ಯೆ ಮಾಡಿಕೊಂಡರು.
ಅಗ್ರಿಗೋಲ್ಡ್ ವಂಚನೆ ಪ್ರಕರಣದ ವಿವರ
ಅಗ್ರಿಗೋಲ್ಡ್ ಬ್ಲೇಡ್ ಸ್ಕೀಮ್ ನಂಬಿ ಕರ್ನಾಟಕದಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ ಹೂಡಿಕೆ ಮಾಡಿದ್ದರು. ಹತ್ತು ಸಾವಿರದಿಂದ 20 ಸಾವಿರ ಹೂಡಿಕೆ ಮಾಡಿಸಿಕೊಳ್ಳುವ ಬ್ಲೇಡ್ ಸ್ಕೀಮ್ ಪರಿಚಯಿಸಿ ಬಡವರಿಂದ ಹೂಡಿಕೆ ಮಾಡಿಸಿಕೊಂಡು ಬಾಂಡ್‌ಗಳನ್ನು ನೀಡಿತ್ತು. ಹಣ ಹೂಡಿಕೆ ಮಾಡಿದವರೇ ಏಜೆಂಟರಾಗಿ ಪರಿವರ್ತನೆಗೊಂಡಿದ್ದರು. ಹೀಗಾಗಿ ಹೂಡಿಕೆ ಮಾಡಿದವರೇ ಹಣದಾಸೆಗೆ ಬಿದ್ದು ಬಡವರಿಂದಲೇ ಸಾವಿರಾರು ಕೋಟಿ ಹೂಡಿಕೆ ಮಾಡಿಸಿದ್ದರು. ಯಾವಾಗ ಅಕ್ರಮ ಬಯಲಿಗೆ ಬಂತೂ ಪ್ರಮುಖ ಏಜೆಂಟರು ಊರು ಬಿಟ್ಟರು. ಇನ್ನೂ ಕೆಲವರು ಆತ್ಮಹತ್ಯೆಗೆ ಶರಣಾದರು. ಎಂಟು ರಾಜ್ಯದ 32 ಲಕ್ಷ ಜನ ಬೀದಿಗೆ ಬಿದ್ದರು. ಎಷ್ಟೋ ಸಲ ಸಿಐಡಿ ಅಧಿಕಾರಿಗಳ ಮುಂದೆ ಪ್ರತಿಭಟನೆ ನಡೆಸಿದರು. ಈಗಲೂ ಚಾತಕ ಪಕ್ಷಿಗಳಿಂದ ಅಸಲಾದರೂ ಕೈಗೆ ಸಿಗಲಿ ಎಂದು ಕಾಯುತ್ತಿದ್ದಾರೆ.
ಜಾರಿ ನಿರ್ದೇಶನಾಲಯದಿಂದ ತನಿಖೆ
ಬೇನಾಮಿ ವಹಿವಾಟು ನಡೆಸಿದ ಅಗ್ರಿಗೋಲ್ಡ್ ಸಂಸ್ಥೆ ವಿರುದ್ಧ ಕೇಸು ದಾಖಲಿಸಿದ್ದ ಜಾರಿ ನಿರ್ದೇಶನಾಲಯದ 2020 ಡಿಸೆಂಬರ್‌ನಲ್ಲಿ ಅಗ್ರಿಗೋಲ್ಡ್ ಸಂಸ್ಥೆಗೆ ಸೇರಿದ 4109 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿತು. ಅಗ್ರಿಗೋಲ್ಡ್ ಸಂಸ್ಥೆಗೆ ಸೇರಿದ ಆಂಧ್ರ ಪ್ರದೇಶದ ಅಮ್ಯೂಸ್ಮೆಂಟ್ ಪಾರ್ಕ್ ಆಸ್ತಿ, ಕರ್ನಾಟಕ, ತೆಲಂಗಾಣ, ಒರಿಸ್ಸಾ ತಮಿಳುನಾಡು ರಾಜ್ಯದಲ್ಲಿ ಹೊಂದಿರುವ ಸುಮಾರು 2809 ಆಸ್ತಿಗಳು ಮಟ್ಟುಗೋಲು ಆಗಿವೆ. ಸಂಸ್ಥೆಗೆ ಸೇರಿದ ಸುಮಾರು 4109 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿತ್ತು.ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಕುರಿತು ಅಗ್ರಿಗೋಲ್ಡ್ ಸಂಸ್ಥೆ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದೇ ಆರೋಪಕ್ಕೆ ಸಂಬಂಧಿಸಿದಂತೆ ಎರಡು ದಿನದ ಹಿಂದಷ್ಟೇ ಸಂಸ್ಥೆಯ ಮುಖ್ಯಸ್ಥ ಅವ್ವ ವೆಂಕಟ ರಾಮರಾವ್, ಅವ್ವ ವೆಂಕಟ ಶೇಷು ಹಾಗೂ ಮತ್ತೊಬ್ಬ ನಿರ್ದೇಶಕನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು.






