ಕೊಚ್ಚಿ : ಕೇರಳದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ದಿನ ನಿತ್ಯ ಹೆಚ್ಚಳವಾಗುತ್ತಿದೆ. ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪಿಟಿ ಥಾಮಸ್ ಇಂದು(ಗುರುವಾರ, ಆಗಸ್ಟ್ 26)ಹೇಳಿದ್ದಾರೆ.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ನಿನ್ನೆ(ಬುಧವಾರ, ಆಗಸ್ಟ್ 25) ಕೇರಳದಲ್ಲಿ 31,000 ಕ್ಕೂ ಹೆಚ್ಚು ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದವು. ದೇಶದಲ್ಲಿ ದಿನವೊಂದರಲ್ಲಿ ದಾಖಲಾಗುವ ಒಟ್ಟು ಶೇಕಡಾ 50 ರಷ್ಟು ಸೋಂಕು ಕೇರಳದಲ್ಲಿ ದಾಖಲಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಅವರು ಪಿಣರಾಯ್ ವಿಜಯನ್ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದೇ ಪಿಣರಾಯ್ ವಿಜಯನ್ ಸರ್ಕಾರ ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಕಳೆದ ವರ್ಷ ಹೇಳಿತ್ತು. ಆದರೇ ಈಗ ಯಾಕೆ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಸೋತಿದ್ದು..? ಕಳೆದ ಭಾರಿ ನಿಯಂತ್ರಣಕ್ಕೆ ಬಂದ ಸೋಂಕು, ಈ ವರ್ಷ ಯಾಕೆ ನಿಯಂತ್ರಣಕ್ಕೆ ಬಂದಿಲ್ಲ..? ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದನ್ನು ಇದು ತೋರಿಸುತ್ತದೆ. ಹಾಗೂ ಕೇರಳ ಸರ್ಕಾರದ ಅಸಲಿ ಮುಖವನ್ನು ದಿನನಿತ್ಯ ದಾಖಲಾಗುತ್ತಿರುವ ಹೊಸ ಕೋವಿಡ್ ಪ್ರಕರಣಗಳು ತೋರಿಸುತ್ತಿವೆ ಎಂದು ಕಿಡಿ ಕಾರಿದ್ದಾರೆ.
ರಾಜ್ಯ ಸರ್ಕಾರ ರಾಜಕೀಯ ವೈರುದ್ಧವನ್ನು ಬಿಟ್ಟು ಕೇಂದ್ರ ಸರ್ಕಾರದೊಂದಿಗೆ ಸೋಂಕು ನಿಯಂತ್ರಣ ಮಾಡುವ ಕ್ರಮಗಳ ಬಗ್ಗೆ ಕಾರ್ಯ ಯೋಜನೆಗಳನ್ನು ರೂಪಿಸಬೇಕು. ಸೋಂಕು ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ತುರ್ತಾಗಿ ಗಂಭೀರ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ರಾಜ್ಯದ ಜನರು ಇಂತಹ ಕೆಟ್ಟ ಪರಿಸ್ಥಿತಿಯಿಂದ ಶೀಘ್ರದಲ್ಲಿ ಹೊರಬರಬೇಕೆಂದು ಬಯಸುತ್ತಿದ್ದಾರೆ. ಸರ್ಕಾರ ಶೀಘ‍್ರದಲ್ಲಿ ಸೋಂಕನ್ನು ನಿಯಂತ್ರಣಕ್ಕೆ ತರುವಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.


