ಸಾಮಾನ್ಯವಾಗಿ ಅಕ್ಕಿಯನ್ನು ಸಂಗ್ರಹಿಸಿಟ್ಟಾಗ ಅದರಲ್ಲಿ ಜೀರುಂಡೆಯಂತಹ, ಸಣ್ಣ ಸಣ್ಣ ಕೀಟಗಳು ಬೆಳೆಯುತ್ತವೆ. ಆ ಹುಳುಗಳನ್ನು ತೆಗೆದ ನಂತರವೂ, ಕೆಲವೊಮ್ಮೆ, ಆ ಅನ್ನವನ್ನು ತಿನ್ನಲು ಮನಸ್ಸಾಗುವುದಿಲ್ಲ. ಹಾಗಾದರೆ, ಅಕ್ಕಿಯಲ್ಲಿ ಕೀಟಗಳು ಬರದಂತೆ ಅದನ್ನು ಸಂಗ್ರಹಿಸುವುದು ಹೇಗೆ ಎಂದು ಯೋಚಿಸುತ್ತೀದ್ದೀರಾ? ಇಲ್ಲಿದೆ ಕೆಲವು ಸಲಹೆಗಳು. ಈ ರೀತಿ ಅಕ್ಕಿ ಸಂಗ್ರಹಿಸಿಟ್ಟರೆ, ಕೀಟಗಳು ಹುಟ್ಟಿಕೊಳ್ಳುವುದನ್ನು ತಡೆಯಬಹುದು.
ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ:
ಯಾವತ್ತಿಗೂ ಅಕ್ಕಿಯನ್ನು ಯಾವುದೇ ಪಾಲಿಥಿನ್ ಅಥವಾ ಪಾತ್ರೆಗಳಲ್ಲಿ ಇಡಬೇಡಿ, ಬದಲಿಗೆ ಅಕ್ಕಿಯನ್ನು ಗಾಳಿಯಾಡದ ಡಬ್ಬದಲ್ಲಿ ಇಡಬೇಕು. ಗಾಳಿಯಾಡದ ಪಾತ್ರೆಗಳು ತೇವಾಂಶದ ನುಗ್ಗುವಿಕೆಗೆ ಕಡಿಮೆ ಮಾಡುತ್ತವೆ. ಇದು ಅಕ್ಕಿಯನ್ನು ದೀರ್ಘಕಾಲ ಸುರಕ್ಷಿತವಾಗಿರಿಸುತ್ತದೆ, ಆದ್ದರಿಂದ ಅದನ್ನು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಡಲು ಪ್ರಯತ್ನಿಸಿ.
ಒಣ ಮೆಣಸಿನಕಾಯಿ ಮತ್ತು ಬೇವಿನೆಲೆ:
ಅಕ್ಕಿಯನ್ನು ಪಾತ್ರೆಯಲ್ಲಿ ಹಾಕಿದ ನಂತರ, ಅದಕ್ಕೆ ಬೇವಿನ ಎಲೆಗಳು ಮತ್ತು 6 ರಿಂದ 7 ಒಣ ಮೆಣಸಿನಕಾಯಿಗಳನ್ನು ಸೇರಿಸಬೇಕು. ಇದು ಅಕ್ಕಿಯನ್ನು ಕೀಟಗಳಿಂದ ರಕ್ಷಿಸುತ್ತದೆ. ಬೇವಿನ ಎಲೆಗಳನ್ನು ಇಟ್ಟುಕೊಳ್ಳುವುದರಿಂದ ಅಕ್ಕಿಯಲ್ಲಿ ಹುಳಗಳು ಹುಟ್ಟಿಕೊಳ್ಳುವುದಿಲ್ಲ. ಕೇವಲ ಬೇವಿನೆಲೆಯನ್ನು ಸಹ ಹಾಕಿಡಬಹುದು.
ಅಕ್ಕಿಯನ್ನು ಫ್ರಿಜ್ ನಲ್ಲಿಡಿ: ಅಕ್ಕಿ ಸಣ್ಣ ಪ್ರಮಾಣದಲ್ಲಿದ್ದರೆ ಅದನ್ನು ಫ್ರಿಜ್ ನಲ್ಲಿಡಿ. ಅಕ್ಕಿಯನ್ನು ಗಾಳಿಯಾಡದ ಪಾತ್ರೆಯಲ್ಲಿ ಹಾಕಿ, ಅದನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಹುದು. ಅನೇಕ ಬಾರಿ ಶಾಖದ ಕಾರಣದಿಂದಲೂ, ಅಕ್ಕಿಯಲ್ಲಿ ಕೀಟಗಳು ಬೆಳೆಯುತ್ತವೆ. ಆದ್ದರಿಂದ ಅದನ್ನು ಫ್ರಿಜ್ನಲ್ಲಿ ಇಡುವುದರಿಂದ ತಂಪಿನಿಂದಾಗಿ ಕೀಟಗಳು ಬೆಳೆಯುವುದಿಲ್ಲ. ತದನಂತರ ಬೇಕಿದ್ದಲ್ಲಿ ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸಬಹುದು.
ಲವಂಗ: ಸುಲಭವಾಗಿ ಲಭ್ಯವಿರುವ ಈ ಲವಂಗಗಳು ಹುಳಗಳು ಹುಟ್ಟುವುದನ್ನು ತಡೆಯಲು ಸಹಾಯ ಮಾಡುತ್ತವೆ. ಆದ್ದರಿಂದ ಅಕ್ಕಿಯ ಜೊತೆ ಲವಂಗವನ್ನು ಹಾಕಿಡಿ. ಅಷ್ಟೇ ಅಲ್ಲ, ನಿಮ್ಮ ಬೀರು ಕಪಾಟನ್ನು ಮತ್ತು ಬಟ್ಟೆಯಿಡುವ ಪ್ರದೇಶವನ್ನು ಸ್ವಚ್ಛಗೊಳಿಸಲು ಬಳಸುವ ಸೋಂಕುನಿವಾರಕಕ್ಕೆ ಸ್ವಲ್ಪ ಲವಂಗ ಎಣ್ಣೆಯನ್ನು ಕೂಡ ಸೇರಿಸಬಹುದು.
ಬೆಳ್ಳುಳ್ಳಿ: ಅಕ್ಕಿಯಿರುವ ಡಬ್ಬಿಯಲ್ಲಿ ಸಾಕಷ್ಟು ಸಿಪ್ಪೆ ತೆಗೆಯದ ಬೆಳ್ಳುಳ್ಳಿ ಬೀಜಗಳನ್ನು ಹಾಕಿ ಇಡಿ. ಬೀಜಗಳು ಒಣಗಿದ ನಂತರ ಅವುಗಳನ್ನು ಬದಲಾಯಿಸಿ. ಇದರಿಂದಲೂ ಕೀಟಗಳು ಹುಟ್ಟುವುದನ್ನು ತಡೆಯಬಹುದು.
ಸೂರ್ಯನ ಬೆಳಕು: ಹೆಚ್ಚಿನ ಪ್ರಮಾಣದ ಅಕ್ಕಿಯು ಜೀರುಂಡೆಗಳಿಂದ ಹಾನಿಗೊಳಗಾಗಿದ್ದರೆ, ಅದನ್ನು ಸೂರ್ಯನ ಬೆಳಕಿನಲ್ಲಿ ಇರಿಸಿ. ಇದರಿಂದ ಕೀಟಗಳನ್ನು ತೆಗೆದುಹಾಕಬಹುದು. ಏಕೆಂದರೆ ಬಿಸಿಲಿನ ಶಾಖವನ್ನು ಅವುಗಳು ಸಹಿಸಿಕೊಳ್ಳುವುದಿಲ್ಲ.



