ನವದೆಹಲಿ :ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಭಾರತದಂತಹ ದೇಶದಲ್ಲಿ ಒಂದು ದೊಡ್ಡ ಪಿಡುಗು ಎಂದೇ ಹೇಳಬಹುದು. ಕೋವಿಡ್ ಸಾಂಕ್ರಾಮಿಕದ ಸಂದರ್ಭ ಸಾರ್ವಜನಿಕ ಸ್ಥಳಗಳಲ್ಲಿ ಉಗುಳದಂತೆ ಆರೋಗ್ಯ ಇಲಾಖೆ ನಿರಂತರ ಸೂಚಿಸುತ್ತಲೇ ಇತ್ತಾದರೂ ಸಮಸ್ಯೆಯ ತೀವ್ರತೆಯೇನೂ ಕಡಿಮೆಯಾಗಿಲ್ಲ.
ಒಂದು ಅಂದಾಜಿನ ಪ್ರಕಾರ ಭಾರತೀಯ ರೈಲ್ವೆ ಪ್ರತಿ ವರ್ಷ ರೈಲು ನಿಲ್ದಾಣಗಳಲ್ಲಿ ಜನರು, ಪ್ರಮುಖವಾಗಿ ಪಾನ್ ಹಾಗೂ ತಂಬಾಕು ಉತ್ಪನ್ನಗಳನ್ನು ಜಗಿದು ಉಗುಳುವುದರಿಂದ ಉಂಟಾಗುವ ಕಲೆಗಳನ್ನು ತೆಗೆಯಲು ಸುಮಾರು ರೂ. 1,200 ಕೋಟಿಯಷ್ಟು ವ್ಯಯಿಸುತ್ತಿದೆ. ಇದರ ಜತೆಗೆ ಸ್ವಚ್ಛತೆಗೆ ಸಾಕಷ್ಟು ನೀರು ಕೂಡ ಬಳಕೆಯಾಗುತ್ತಿದೆ ಎಂದು indiatoday.in ವರದಿ ಮಾಡಿದೆ.
ಜನರು ನಿಲ್ದಾಣಗಳಲ್ಲಿ ಉಗುಳುವುದನ್ನು ತಡೆಯಲು ರೈಲು ನಿಲ್ದಾಣಗಳಲ್ಲಿ ಪರಿಸರ ಸ್ನೇಹಿ ಸ್ಪಿಟ್ಟೂನ್ ಪೌಚ್ ಒದಗಿಸುವ ವೆಂಡಿಂಗ್ ಮಶೀನುಗಳನ್ನು ಅಳವಡಿಸಲಾಗುತ್ತಿದೆ. ಸುಮಾರು 42 ನಿಲ್ದಾಣಗಳಲ್ಲಿ ಈ ಸೌಲಭ್ಯವಿದ್ದು ಈ ಪೌಚ್ ರೂ. 5ರಿಂದ ರೂ. 10 ರ ತನಕದ ದರಗಳಲ್ಲಿ ಲಭ್ಯವಿದೆ. ಇವುಗಳನ್ನು 15ರಿಂದ 20 ಬಾರಿ ಬಳಸಬಹುದಾಗಿದ್ದು ಒಮ್ಮೆ ಬಿಸಾಕಿದ ನಂತರ ಅದರೊಳಗಿನ ಬೀಜಗಳಿಂದ ಗಿಡಗಳು ಬೆಳೆಯುತ್ತವೆ. ನಾಗ್ಪುರ್ ಮೂಲದ ಕಂಪೆನಿ ತಯಾರಿಸಿರುವ ಈ ಸ್ಪಿಟ್ಟೂನ್ ಒದಗಿಸುವ ಈಝಿಸ್ಪಿಟ್ ಯಂತ್ರಗಳನ್ನು ಹಲವೆಡೆ ಅಳವಡಿಸಲಾಗಿದೆ. ಈ ಉತ್ಪನ್ನ ಪಾಕೆಟ್ ಪೌಚ್, ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾದ ಕಂಟೇನರ್ ಹಾಗೂ ಸ್ಪಿಟ್ ಬನ್ ರೂಪದಲ್ಲಿ ಲಭ್ಯವಿದೆ.
ಪ್ರಸಕ್ತ ರೈಲು ನಿಲ್ದಾಣದಲ್ಲಿ ಉಗುಳಿದರೆ ರೂ. 500 ದಂಡ ವಿಧಿಸುವ ನಿಯಮವಿದೆ.



