ಉಪ್ಪಳ: ಕಾನೂನು ಪಾಲನೆಗಾಗಿ ಲಾಠಿ ಹಿಡಿಯುವ ಕೈಗಳು ಸಮಾಜ ಸೇವೆಯ ಧ್ಯೇಯದಿಂದ ಹಾರೆ,ಕತ್ತಿ, ಗುದ್ದಲಿ ಗಳನ್ನೂ ಹಿಡಿಯಬಲ್ಲರು ಎಂಬುವುದನ್ನು ಕುಂಬಳೆ ಪೋಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಪ್ರಮೋದ್ ಮತ್ತು ಅವರ ಸಹೋದ್ಯೋಗಿ 'ಜನಮೈತ್ರಿ' ಪೋಲಿಸರು ತೋರಿಸಿ ಕೊಟ್ಟಿದ್ದಾರೆ.
ನವೆಂಬರ್ ಒಂದರಂದು ಶಾಲೆಗಳು ಪುನರಾರಂಭವಾಗುವ ನಿಟ್ಟಿನಲ್ಲಿ ಮಂಗಲ್ಪಾಡಿ ಸರ್ಕಾರಿ ಶಾಲಾ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಸ್ವಇಚ್ಛೆಯಿಂದ ನಿರ್ವಸಿದ ಪೋಲೀಸರ ಈ 'ಜನಸ್ನೇಹೀ' ಮಾದರಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಕಳೆದ ಶುಕ್ರವಾರ ಬೆಳಗ್ಗೆ 7 ಘಂಟೆಯಿಂದ 9.30 ರ ವರೆಗೆ ನಡೆದ ಈ ಸೇವಾ ಕಾರ್ಯದಲ್ಲಿ ಸಿ.ಐ ಪ್ರಮೋದರ ಜೊತೆಗೆ ಯಸ್. ಐ ರಾಜೀವನ್ ಒಳಗೊಂಡಿರುವ 15 ಮಂದಿ ಪೋಲೀಸರ ತಂಡ ಭಾಗವಹಿಸಿ ಜನಪರ ಕಾರ್ಯಗಳ ಬಗ್ಗೆ ತಮ್ಮ ಬದ್ಧತೆಯನ್ನು ಮೆರೆಯಿತು. ಇವರೊಂದಿಗೆ ನ್ಯೂ ಸ್ಟಾರ್,ಅಡ್ಕ, ಬ್ರದರ್ಸ್ ಅಡ್ಕ, ಸೆವೆನ್ ಲವ್, ಜನಪ್ರಿಯ ಕ್ಲಬ್ಬುಗಳ ಸದಸ್ಯರು,ವಾರ್ಡ್ ಸದಸ್ಯ,ಇಬ್ರಾಹಿಂ,ಪಿ. ಟಿ. ಎ ಅಧ್ಯಕ್ಷರಾದ ಉಮ್ಮರ್ ಅಪೆÇೀಲೋ, ಎಲ್.ಪಿ ಮತ್ತು ಹೈಸ್ಕೂಲ್ ವಿಭಾಗದ ಅಧ್ಯಾಪಕರು ಸಾಥ್ ನೀಡಿದರು.
ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಪ್ರಮೋದ್ ಅವರು ಮಂಗಲ್ಪಾಡಿ ಶಾಲೆಯ ಉನ್ನತಿಗೆ ತಮ್ಮೆಲ್ಲಾ ಸಹಾಯ, ಸಹಕಾರವನ್ನು ನೀಡುವುದಾಗಿ ನುಡಿದರು.
ಬೆಳಗ್ಗಿನ ಉಪಹಾರವನ್ನು ಪ್ರಾಯೋಜಿಸಿದ್ದ ನ್ಯೂ ಸ್ಟಾರ್ ತಂಡವನ್ನು ಮುಖ್ಯೋಪಾಧ್ಯಾಯರು ಅಭಿನಂದಿಸಿದರು. ಮುಖ್ಯೋಪಾಧ್ಯಾಯ ಜಿ ಕೆ ನಾಯಕ್ ಸ್ವಾಗತಿಸಿ, ಸೀನಿಯರ್ ಅಸ್ಸಿಸ್ಟಂಟ್ ರಾಧಾಕೃಷ್ಣ. ಕೆ. ವಂದಿಸಿದರು. ನೌಕರ ಸಂಘದ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ನಿರೂಪಿಸಿದರು.



