ಬದಿಯಡ್ಕ: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜರಗುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕೊಡಲ್ಪಡುವ ಕಲ್ಕೂರ ಪ್ರತಿಷ್ಠಾನ ರಾಜ್ಯೋತ್ಸವ ಸಾಧಕ ಪುರಸ್ಕಾರಕ್ಕೆ ಗಡಿನಾಡು ಕಾಸರಗೋಡಿನ ನಾಲ್ವರು ಬಾಲಪ್ರತಿಭೆಗಳು ಆಯ್ಕೆಯಾಗಿದ್ದಾರೆ. ಬಹುಮುಖ ಪ್ರತಿಭೆಗಳಾದ ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿನಿ, ಶಂಕರ ಭಟ್ ಬಾಳೆಗದ್ದೆ ಮತ್ತು ಆಶಾ ದಂಪತಿಯರ ಪುತ್ರಿ ಅನುಷಾ ಬಾಳೆಗದ್ದೆ, ಎಸ್.ಎಸ್.ಎಚ್.ಎಸ್ ಕಾಟುಕುಕ್ಕೆ ಶಾಲೆಯ ವಿದ್ಯಾರ್ಥಿನಿ, ಹರಿಪ್ರಸಾದ್.ಯಂ ಮತ್ತು ದಿವ್ಯಮಣಿ ದಂಪತಿಯರ ಪುತ್ರಿ ಸ್ಮೃತಿ..ಎಂ., ಬಿಇಯಂ ಪ್ರೌಢ ಶಾಲಾ ವಿದ್ಯಾರ್ಥಿ, ಸುದರ್ಶನ.ಎ.ಟಿ ಹಾಗೂ ಮೋಹಿನಿ.ಸಿ.ಎಚ್ ದಂಪತಿಯರ ಪುತ್ರ ಕಾರ್ತಿಕ್ ರಾವ್.ಎ ಮತ್ತು ಪ್ರಶಾಂತ್ ರಾಜ್.ವಿ.ಟಿ ಅಡೂರು-ಜಯಂತಿ ದಂಪತಿಗಳ ಪುತ್ರ, ಅಡೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಆದ್ಯಂತ್ ಅಡೂರು ಆಯ್ಕೆಯಾದವರು.ಇಂದು ಮಂಗಳೂರಿನ ಶಾರದಾ ವಿದ್ಯಾಲಯದ ಸಭಾ ಭವನದಲ್ಲಿ ಜರಗುವ ಕನ್ನಡ ರಾಜ್ಯೊತ್ಸವ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಬಾಲಪ್ರತಿಭಾ ಸಾಧಕ ಪುರಸ್ಕಾರ ಸ್ವೀಕರಿಸಲಿದ್ದಾರೆ.
ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಅಧ್ಯಕ್ಷೆಯಾಗಿ ಗಡಿನಾಡಿನ ಕವಯಿತ್ರಿ ಸಂಧ್ಯಾಗೀತಾ ಬಾಯಾರು:
: ಕರ್ನಾಟಕ ರಾಜ್ಯೋತ್ಸವದಂಗವಾಗಿ ಜರಗುವ ಕಲ್ಕೂರ ಪ್ರತಿಷ್ಠಾನ ಕನ್ನಡ ರಾಜ್ಯೋತ್ಸವ ಸಂದೇಶ ಕವಿಗೋಷ್ಠಿಯ ಅಧ್ಯಕ್ಷತೆಗೆ ಗಡಿನಾಡಿನ ಕವಯಿತ್ರಿ ಸಂಧ್ಯಾಗೀತಾ ಬಾಯಾರು ಆಯ್ಕೆಯಾಗಿದ್ದಾರೆ. ಬುಧವಾರ(ಇಂದು) ಮಂಗಳೂರು ಶಾರದಾ ವಿದ್ಯಾಲಯದ ಸಭಾ ಭವನದಲ್ಲಿ ನಡೆಯುವ ಕವಿಗೋಷ್ಠಿಯನ್ನು ಮಂಗಳೂರು ಮಹಾನಗರಪಾಲಿಕೆಯ ಮಹಾಪೌರರಾಗಿರುವ ಪ್ರೇಮಾನಂದ ಶೆಟ್ಟಿ ಉದ್ಘಾಟಿಸುವರು. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಡಾ.ಸಿ.ಸೋಮಶೇಕರ್ ರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪ್ರೊ.ಎಂ.ಬಿ.ಪುರಾಣಿಕ್, ಪೊಳಲಿ ನಿತ್ಯಾನಂದ ಕಾರಂತ ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ರಾಜ್ಯೋತ್ಸವ ಕವಿಗೋಷ್ಠಿ ಜರಗಲಿದೆ. ಆಯ್ದ ಕವಿ ಕವಯತ್ರಿಯರು ಕವನ ವಾಚನ ಮಾಡಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಉಪಾಧ್ಯಕ್ಷೆಯಾಗಿರುವ ಸಂಧ್ಯಾಗೀತಾ ಬಾಯಾರು ಅವರ ಕವನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಸಂಯೋಚನೆ ಎಂಬ ವಿಶಿಷ್ಠ ಗಾನ ಸಂಯೋಜನೆಯಡಿಯಲ್ಲಿ ಹೆಸರಾಂತ ಗಾಯಕರು ಹಾಡಿದ್ದಾರೆ. ಮಂಗಳೂರು ಆಕಾಶವಾಣಿಯ ತಿಂಗಳ ಹಾಡು ಕಾರ್ಯಕ್ರಮದಲ್ಲಿ ಇವರು ಬರೆದ ಭಾವಗೀತೆ ಕೇಳುಗರ ಮನತಣಿಸಿದೆ. ನಮ್ಮ ಕಾಸರಗೋಡು ಹಾಡು ಖ್ಯಾತ ನೃತ್ಯಗುರು ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಅವರ ನಿರ್ದೇಶನದಲ್ಲಿ ಹಲವಾರು ಪ್ರದರ್ಶನ ಕಂಡಿದೆ. ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಚಿಣ್ಣರ ಕಲರವ ಮುಂತಾದವುಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಭಾಗವಹಿಸಿರುತ್ತಾರೆ.

