HEALTH TIPS

ಕಾಸರಗೋಡು: ಆಡಳಿತದ ವಿರೋಧದ ನಡುವೆಯೇ ಸ್ವರ್ಗದ ಜಠಾಧಾರಿ ದೇಗುಲಕ್ಕೆ ದಲಿತರ ಪ್ರವೇಶ

              ಕಾಸರಗೋಡು: ಶತಮಾನಗಳಿಂದ ದಲಿತರಿಗೆ ಪ್ರವೇಶ ನಿಷೇಧವಾಗಿದ್ದ ಕರ್ನಾಟಕ ಗಡಿ ಭಾಗದ ಎಣ್ಮಕಜೆ ಗ್ರಾಮದ ಸ್ವರ್ಗದ ಜಠಾಧಾರಿ ದೇವಸ್ಥಾನಕ್ಕೆ ಪತ್ತಿಕಜಾತಿ ಕ್ಷೇಮ ಸಮಿತಿ (ಪಿಕೆಎಸ್‌) ಮೂಲಕ ದಲಿತರ ಪ್ರವೇಶವಾಗಿದ್ದು, ದಲಿತ ಸಮುದಾಯದಲ್ಲಿ ನಿರಾಳ ಭಾವ ಮೂಡಿದೆ.

              ಮೇಲ್ಜಾತಿಯವರಿಗಷ್ಟೇ ದೇವಸ್ಥಾನ ಪ್ರವೇಶ, ದಲಿತರು, ಕೆಳಜಾತಿಯವರಿಗೆ ಈ ಅರ್ಹತೆ ಇಲ್ಲ ಎಂದು ಪ್ರತಿಪಾದಿಸುತ್ತಲೇ ಬಂದಿರುವ ದೇವಸ್ಥಾನದ ಆಡಳಿತ ವರ್ಗ ಈಗಲೂ ದಲಿತರ ಪ್ರವೇಶಕ್ಕೆ ವಿರೋಧ ಸೂಚಿಸಿದ್ದು, ಹೊಸ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.

               ಇದೇ ಊರಿನವರಾದ ದಲಿತ ಸಮುದಾಯಕ್ಕೆ ಸೇರಿದ ಕೃಷ್ಣ ಮೋಹನ ಅವರು ಮೂರು ವರ್ಷಗಳ ಹಿಂದೆ ಈ ದೇವಸ್ಥಾನದ 18 ಮೆಟ್ಟಿಲನ್ನು ಹತ್ತಿ, ದೇವಸ್ಥಾನದ ಆವರಣದೊಳಗೆ ಪ್ರವೇಶಿಸಿದ್ದರು. ಆಗ ಗದ್ದಲ ಏರ್ಪಟ್ಟು ಪೊಲೀಸರೂ ಸ್ಥಳಕ್ಕೆ ಬರಬೇಕಾಯಿತು. ದೇವಸ್ಥಾನದೊಳಗೆ ದಲಿತರೂ ಪ್ರವೇಶಿಸಬಹುದು ಎಂದು ಆಗ ತಿಳಿಸಲಾಗಿತ್ತು. ದಲಿತರ ಪ್ರವೇಶವನ್ನೂ ಯಾವುದೇ ಕಾರಣಕ್ಕೂ ಒಪ್ಪದ ದೇವಸ್ಥಾನ ಆಡಳಿತ ಮಂಡಳಿ, ಕೀಲಿ ಕಳೆದುಹೋಗಿದೆ ಎಂದು ಹೇಳಿ, ದೇವಸ್ಥಾನವನ್ನು ಸಂಪೂರ್ಣ ಮುಚ್ಚಿಬಿಟ್ಟಿತು. ದಲಿತರು ಮಾತ್ರವಲ್ಲ, ಇತರ ಯಾವ ಸಮುದಾಯದವರೂ ಕಳೆದ ಮೂರು ವರ್ಷಗಳಿಂದ ದೇವಸ್ಥಾನದೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಲಾಗಿತ್ತು.

                ಆದರೆ ಕೆಲವು ದಿನಗಳ ಹಿಂದೆ ಪಿಕೆಎಸ್‌ ನೇತೃತ್ವದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಜನರ ಗುಂಪು ದೇವಾಲಯದ 18 ಮೆಟ್ಟಿಲುಗಳನ್ನು ಏರಿ ದೇವಾಲಯವನ್ನು ಪ್ರವೇಶಿಸಿದೆ. ಕೃಷ್ಣ ಮೋಹನ್‌ ಸಹ ಈ ತಂಡದಲ್ಲಿದ್ದರು.

              ಕೇರಳದಲ್ಲಿ 1947ರಿಂದಲೂ ದಲಿತರ ದೇವಸ್ಥಾನ ಪ್ರವೇಶ ನಿಷೇಧವನ್ನು ತೆಗೆದು ಹಾಕಲಾಗಿದೆ. ಆದರೆ ಸಾಕಷ್ಟು ಕಡೆಗಳಲ್ಲಿ ಈಗಲೂ ದಲಿತರು, ಸಮಾಜದಲ್ಲಿ ಕೆಳವರ್ಗದವರೆಂದು ಗುರುತಿಸಿಕೊಂಡವರಿಗೆ ದೇವಸ್ಥಾನದ ಆವರಣ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಅಂತಹ ದೇವಸ್ಥಾನಗಳಲ್ಲಿ ಸ್ವರ್ಗದ ಈ ದೇವಸ್ಥಾನವೂ ಒಂದೆನಿಸಿತ್ತು.

            'ದೇವಸ್ಥಾನ ಪ್ರವೇಶಕ್ಕಷ್ಟೇ ನಿಷೇಧವಲ್ಲ, ದೇವಸ್ಥಾನದಲ್ಲಿ ನಡೆಯುತ್ತಿದ್ದ ತೆಯ್ಯಂ ಅನ್ನು ಸಹ ದಲಿತರು ದೂರದಿಂದಲೇ ನೋಡಬೇಕಿತ್ತು. ದೇವರಿಗೆ ನೇರವಾಗಿ ದಕ್ಷಿಣೆ ಹಾಕುವಂತಿರಲಿಲ್ಲ. ಇದೊಂದು ಅತ್ಯಂತ ಅಮಾನವೀಯವಾದ ತಾರತಮ್ಯದ ನೀತಿಯಾಗಿತ್ತು' ಎಂದು ಪಿಕೆಎಸ್‌ ಜಿಲ್ಲಾ ಕಾರ್ಯದರ್ಶಿ ಬಿ.ಎಂ.ಪ್ರದೀಪ್ ಹೇಳಿದರು.

            'ರಾಜ್ಯದಲ್ಲಿ ಕೆಲವೆಡೆ ಈಗಲೂ ಇಂತಹ ತಾರತಮ್ಯ ಧೋರಣಿ ಇರುವುದು ನಿಜ, ಸರ್ಕಾರದ ಆದೇಶವೊಂದರಿಂದಲೇ ಇದನ್ನು ನಿವಾರಿಸಲು ಸಾಧ್ಯವಿಲ್ಲ, ಸಮಾಜವೇ ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕಾಗಿದೆ' ಎಂದು ರಾಜ್ಯದ ಸಮಾಜ ಕಲ್ಯಾಣ ಸಚಿವ ಕೆ.ರಾಧಾಕೃಷ್ಣನ್‌ ಹೇಳಿದರು.

        ಅಭಿಮತ:

      ಕೋಟ್ಸ್:

    ಶತಮಾನಗಳಿಂದ ಅನುಸರಿಸಿಕೊಂಡುಬಂದ ದಲಿತ ಪ್ರವೇಶ ನಿಷೇಧವೆಂಬ ಪಿಡುಗಿಗೆ ಈ ಶತಮಾನದಲ್ಲೂ ನ್ಯಾಯ ದೊರಕದಿರುವುದು ಹೇಯಕರ. ಹದಿನೆಂಟು ಮೆಟ್ಟಲು ಏರಬಾರದೆಂಬ ಅಮಾನುಷ ಪದ್ದತಿಗೆ ಈಗ ನ್ಯಾಯದೊರಕಿಸಲು ಯತ್ನಿಸಲಾಗಿದೆ.ಸಾಂವಿಧಾನಿಕವಾಗಿ ಎಲ್ಲರೂ ಸಮಾನರೆಂಬ ನ್ಯಾಯವನ್ನು ಅನುಸರಿಸಲು ಆಡಳಿತ ಸಮಿತಿ ಮುಂದಾಗಬೇಕು. ಜಡಾಧಾರಿ ಕ್ಷೇತ್ರದ ಆವರಣದ ಬಾಗಿಲ ಬೀಗ ತೆರೆದು ಒಳ ಪ್ರವೇಶಿಸಲು ಅನುಮತಿಸಬೇಕು.

          ಕೃಷ್ಣಮೋಹನ ಪಡ್ರೆ.

             ಸ್ಥಳೀಯ ಮುಖಂಡ, ದಲಿತ ಸಮಿತಿ ನೇತಾರ...


Post a Comment

2 Comments
* Please Don't Spam Here. All the Comments are Reviewed by Admin.
  1. ನಮಸ್ಕಾರ, ಅಲ್ಲಿ ದೈವ ಸ್ಥಾನಕ್ಕೆ ಬೀಗ ಹಾಕಿ ಸುಮಾರು 4 ವರ್ಷ ಮೇಲಾಯಿತು, ಅಲ್ಲಿ ಪ್ರವೇಶಿಸಲು ಅವಕಾಶ ಈಗ ಯಾರಿಗೂ ಇಲ್ಲ, ಅಂತಹ ಸ್ಥಿತಿಯಲ್ಲಿ, 18 ಮೆಟ್ಟಿಲು ಹತ್ತಿ ಫೋಟೋ ತೆಗೆದುದೈವ ಸ್ಥಾನ ನುಗ್ಗಿದ ರೀತಿ ವರದಿ ಮಾಡಿ ಏನು ಪ್ರಯೋಜನ, ಪತ್ರಿಕೆ ವರದಿ ಮಾಡುವ ಮೊದಲು ನೀವೇ ಹೋಗಿ ನೋಡಿದ್ರೆ ಸ್ವಲ್ಪ ವರದಿಗೆ ನೈಜತೆ ಬರುತ್ತಿತ್ತೇನೋ, ಅಷ್ಟಕ್ಕೂ ನನಗೂ ದೇವಸ್ಥಾನ ಎಲ್ಲರ ಪೂಜ್ಯ ಸ್ಥಾನ ಆಗಬೇಕು ವಿನಃ ಘರ್ಷಣೆ, ಜಾತಿ ಕಲಹ, ಪ್ರತಿಷ್ಠೆಗೆ ರಹ ದಾರಿ ಆಗಬಾರದು ಇದು ನನ್ನ ಕಳಕಳಿ

    ReplyDelete
  2. ಕೃಷ್ಣ ಮೋಹನ ಮತ್ತು ಶ್ರೀನಿವಾಸ ನಾಯ್ಕ್ ಈ ಮೊದಲೇ ಈ ವಿಷಯಗಳನ್ನು ಆಡಳಿತ ವರ್ಗದ ಸದಸ್ಯರ ಸಮ್ಮುಖ ಪ್ರಸ್ತಾಪಿಸಿದ್ದರು.ಮೂರುವರೆ ವರ್ಷದ ಹಿಂದೆ ಇದೇ ದೈವದ ಮೂಲಸ್ಥಾನದಲ್ಲಿ ಬ್ರಹ್ಮಕಲಶ ವಾದಾಗ ಊರಿಗೆ ಊರೇ ಭಾಗಿಯಾಗಿ ಸಂಭ್ರಮಿಸಿ ತ್ತು.ಅಲ್ಲಿ ಇಂತಹ ಯಾವ ತಗಾದೆ, ಮೇಲು ಕೀಳು ಮನೋಭಾವ,ಅಸ್ಪ್ರಶ್ಯತೆ,
    ದಲಿತರು ಎಂಬ ಕೀಳುನೋಟ ಯಾವುದಕ್ಕೂ ಅಸ್ಪದವಿರಲಿಲ್ಲ.ಅಲ್ಲಿಯ ಆರೇಳು ದಿನಗಳ ಕಾರ್ಯಕ್ರಮದ ಸಂಭ್ರಮ,ಸಡಗರ,ಉತ್ತಮ ಸಂಯೋಜನೆ,ಎಲ್ಲ ಜಾತಿ ಬಾಂಧವರ ಒಗ್ಗಟ್ಟು ಹಾಗೂ ಕಠಿಣ ಪರಿಶ್ರಮದ ಫಲವಾಗಿ ಊರಿಗೆ ಊರೇ ಸಂಭ್ರಮಿಸಿ
    ಇತರರಿಗೆ ಮಾದರಿ ಯಾಗುವಂತೆ ನಡೆದಿತ್ತು.
    ಇ ದನ್ನು ಸಹಿಸದೆ ಮತ್ಸರದಿಂದ ನಡೆದುದರಿಂದ ಈಗ ಈ ಸಂದಿಗ್ಧ ಸ್ಥಿತಿಯುಂಟಾಗಿದೆ ಅನ್ನಬಹುದೇನೋ?
    ಇಲ್ಲದಿದ್ದರೆ ಶತಮಾನಗಳ ಚರಿತ್ರೆ ಇರುವ ಈ ದೈವದ ಮಹಿಮೆ ಕ್ಷುಲ್ಲಕ ಕಾರಣಗಳಿಂದ ನಿಲ್ಲಲು ಸಾಧ್ಯವಿರಲಿಲ್ಲ.ಆರ್ಥಿಕ ಸ್ಥಿತಿ ದಯನೀಯ ವಾಗಿರುವಾಗಲೂ ಇಲ್ಲಿ ವರ್ಷಂಪ್ರತಿ ನಡೆಯುವ ಕಟ್ಟುಕಟ್ಟಲೆಗಳು ಸಾಂಗವಾಗಿ,ಸುಂದರವಾಗಿ ನಡೆಯುತ್ತಿದ್ದವು.ಮೂಲಸ್ಥಾನ ದಲ್ಲಿ ಒಳ್ಳೆ ಕಾರ್ಯಕ್ರಮ ನಡೆದ ನಂತರ ರಾಜಸ್ಥಾನದಲ್ಲಿ ಇನ್ನೂ ಒಳ್ಳೆಯ ರೀತಿಯಲ್ಲಿ ಕಟ್ಟು ಕಟ್ಟಳೆ ನಡೆಯಬೇಕಿತ್ತು.ಆದ್ರೆ ವಿಪರ್ಯಾಸ ಅನ್ನುವಂತೆ ಎಲ್ಲವೂ ಸ್ಥಬ್ದವಾಗಿದೆ.ಇದು ಖಂಡನೀಯ.ಊರ ಸಮಸ್ತ ಜಾತಿ,ವರ್ಗ, ವರ್ಣಭೇದ ವಿಲ್ಲದೆ ಒಗ್ಗಟ್ಟಿನಿಂದ ನಡೆಯಬೇಕಾಗಿದ್ದ ಈ ಪರ್ವ ನಡೆಯದೇ ಎಲ್ಲರಿಗೂ ನಿರಾಶೆ,ಹತಾಶೆ,ಸಂಕಟವಾಗುತ್ತದೆ.ಕೆಲವೇ ಪಟ್ಟಭದ್ರರ ಹಿತಾಸಕ್ತಿಯಿಂದ ಹೀಗೆಲ್ಲ ನಡೆಯುವುದು ಊರಿಗೆ ಕ್ಷೇಮಕರವಲ್ಲ.ಊರ ಒಗ್ಗಟ್ಟಿಗೆ ಇದು ಮಾರಕ.
    ಈ ದೈವದ ನುಡಿಗಾಗಿ ಕಾತರಿಸುವ ಜನಸಾಮಾನ್ಯರು ತುಂಬಾ ನೊಂದಿದ್ದಾರೆ. ಅವರ ಜೀವನ ಅಭದ್ರವಾಗಿದೆ.ಇಲ್ಲಿ ನಡೆಯುವ ಪರ್ವ( ಮಹಿಮೆ),ಅನ್ನದಾನ,ಸಂಕ್ರಾಂತಿ ತಂಬಿಲ,ನಿತ್ಯದೀಪ,ವಿಷು ಇತ್ಯಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ವಿಲ್ಲದೆ ಸಾಮಾನ್ಯ ಜನರು ನೊಂದಿದ್ದಾರೆ.ಶುಭ ನಿರೀಕ್ಷೆಯಲ್ಲಿದ್ದಾರೆ.ತಮ್ಮ ದುಃಖ ದುಮ್ಮಾನ ಗಳನ್ನು ದೈವದ ಪಾದಗಳಲ್ಲಿ ಸಮರ್ಪಿಸಿ ಪರಿಹಾರ ಕಂಡುಕೊಳ್ಳುವ ಮಾರ್ಗ ಮುಚ್ಚಿರುತ್ತದೆ ಎಂಬ ಚಿಂತೆಯಲ್ಲಿ ಇದ್ದಾರೆ.ಆಡಳಿತ ವರ್ಗದವರು ಪರಿಹಾರ ಕಂಡು ಕೊಂಡು ಶೀಘ್ರ ಪರ್ವಗಳನ್ನು ನಡೆಸಲಿ ಎಂಬ ನಿರೀಕ್ಷೆಯಲ್ಲಿ
    ಊರ ಜನಸಾಮಾನ್ಯರ ಪರವಾಗಿ.

    ReplyDelete

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries