ಪೆರ್ಲ: ಪಡ್ರೆ ಗ್ರಾಮದ ಆರಾಧ್ಯ ದೈವ ಜಟಾಧಾರಿ ದೈವಸ್ಥಾನದ ನಿತ್ಯ ನೈಮಿತ್ತಿಕ ಕಾರ್ಯಗಳು ಕಾರಣಾಂತರದಿಂದ ಸ್ಥಗಿತಗೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧೀ ಚರ್ಚೆಗಳು ನಡೆಯುತ್ತಿರುವಂತೆ ಮಾಧ್ಯಮ ಪ್ರಚಾರದ ಭರದಲ್ಲಿ ಹಾಗೂ ಕ್ಷೇತ್ರದ ವೀಡಿಯೋ ಮಾಡುವ ತುರಾತುರಿಯಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮೀ ಸನ್ನಿಧಾನದಂತೆ ಸ್ತ್ರೀ ಪ್ರವೇಶ ನಿಷೇಧವಿರುವ ಪಡ್ರೆ ಶ್ರೀ ಜಟಾಧಾರಿ ದೈವಸ್ಥಾನದ ಪ್ರಾಂಗಣಕ್ಕೆ ಯು ಟ್ಯೂಬ್ ಚಾನಲ್ ಒಂದರ ಮಹಿಳಾ ಸಿಬ್ಬಂದಿ ಹಾಗೂ ಊರಿನ ಓರ್ವ ವ್ಯಕ್ತಿ ಚಪ್ಪಲಿ ಧರಿಸಿ ಪ್ರವೇಶಿಸಿ ಕ್ಷೇತ್ರವನ್ನು ಅಪವಿತ್ರಗೊಳಿಸಿ, ಊರ ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವುದಾಗಿ ಆರೋಪಿಸಿ ಮಂಗಳವಾರ ರಾತ್ರಿ ಸ್ವರ್ಗ ಸೇತುವೆ ಬಳಿಯಿಂದ ಸ್ವರ್ಗ ಜಂಕ್ಷನ್ ವರೆಗೆ ಪಂಜಿನ ಮೆರವಣಿಗೆ ಹಾಗೂ ಸ್ವರ್ಗ ಜಂಕ್ಷನ್ ನಲ್ಲಿ ಪ್ರತಿಭಟನೆ ಸಭೆ ನಡೆಯಿತು.
ಕ್ಷೇತ್ರ ಸಂರಕ್ಷಣಾ ಸಮಿತಿ ಕಾಟುಕುಕ್ಕೆ ಘಟಕದ ಅಧ್ಯಕ್ಷ ಕಾರ್ತಿಕ್ ಶಾಸ್ತ್ರಿ ಮಾತನಾಡಿ, ಕೆಲವೊಂದು ದುಷ್ಟ ಶಕ್ತಿಗಳು ಸ್ವ-ಹಿತಾಸಕ್ತಿಗಾಗಿ ಹಿಂದುಗಳ ಒಗ್ಗಟ್ಟು ಮುರಿಯಲು ಶ್ರಮಿಸುತ್ತಿದ್ದು ಈ ಕುಮ್ಮಕ್ಕು ಅಥವಾ ಷಡ್ಯಂತ್ರಕ್ಕೆ ಹಿಂದುಗಳು ಬಲಿಯಾಗಬಾರದು ಎಂದರು.




