ಪೆರ್ಲ: ಇಂಗ್ಲಂಡ್ ನ ಪ್ರತಿಷ್ಟಿತ ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದಲ್ಲಿ ಉನ್ನತ ಸಂಶೋಧನೆ ಹಾಗೂ ಉದ್ಯೋಗ ನಿರ್ವಹಣೆಗಾಗಿ ವಿದೇಶ ಪ್ರಯಾಣಿಸಲಿರುವ ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯ ಹಳೆ ವಿದ್ಯಾರ್ಥಿ, ಯುವ ಸಂಶೋಧಕ ಡಾ.ವೈಶಾಖ್ ಕೆದಂಬಾಯಿಮೂಲೆ ಅವರಿಗೆ ಸಂಸ್ಥೆಯ ವತಿಯಿಂದ ಸೋಮವಾರ ಶುಭ ವಿದಾಯ ಹಾಗೂ ಗೌರವಾರಾರ್ಪಣೆ ಕಾರ್ಯಕ್ರಮ ನಡೆಯಿತು.
ಶಾಲಾ ವ್ಯವಸ್ಥಾಪಕ ಹೃಷಿಕೇಶ್ ವಿ.ಎಸ್.ಶಾಲು ಹೊದೆಸಿ, ಪಾರಿತೋಷಕ ನೀಡಿ ಗೌರವ ಅರ್ಪಿಸಿದರು.ಹಿರಿಯ ಶಿಕ್ಷಕ ಸಚ್ಚಿದಾನಂದ ಮೊಗೇರು ಶುಭ ಹಾರೈಸಿದರು.ಮುಖ್ಯ ಶಿಕ್ಷಕಿ ಗೀತಾಕುಮಾರಿ ಬಿ, ಶಿಕ್ಷಕರು ಉಪಸ್ಥಿತರಿದ್ದರು.ಪದ್ಮನಾಭ ರೈ ವಂದಿಸಿದರು. ವೆಂಕಟ ವಿದ್ಯಾಸಾಗರ್ ನಿರೂಪಿಸಿದರು.
ಅತಿಸೂಕ್ಷ್ಮ ಗ್ರ್ಯಾಫಿನ್ ನಿಕಲ್ ಬಳಸಿ ಕ್ರಯೋಜನಿಕ್ ತಾಪಮಾನ ಸಂವೇದಕ ಆವಿಷ್ಕಾರಕ್ಕೆ ವೈಶಾಖ್ ಉದಯೋನ್ಮುಖ ಸಂಶೋಧಕ(ಎನ್‍ಆರ್‍ಡಿಸಿ) ಪ್ರಶಸ್ತಿ ಹಾಗೂ ಅತಿ ಶೀತ ಹಾಗೂ ಅತಿ ಉಷ್ಣ ಸಂದರ್ಭದಲ್ಲಿ ಗ್ರ್ಯಾಫೀನ್ ಬಳಸಿ ಶರೀರದ ಉಷ್ಣತೆ ಕಾಪಾಡುವ 'ಬಾಡಿ ವಾರ್ಮರ್' ಸಂಶೋಧನೆಗೆ 'ಗಾಂಯನ್ ಯಂಗ್ ಇನ್ನೋವೇಟರ್' ಪ್ರಶಸ್ತಿ 'ವಿಯರೇಬಲ್ ಟ್ಯಾಟೋ ಸೆನ್ಸರ್ಸ್' ಸಂಶೋಧನೆಗೆ ರಾಷ್ಟ್ರೀಯ ಯುವ ಸಂಶೋಧಕ ಪ್ರಶಸ್ತಿ ಪಡೆದಿದ್ದರು.
ಸ್ವರ್ಗ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್ ಹಾಗೂ ಪ್ರಸ್ತುತ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಅವರ ಪುತ್ರ ವೈಶಾಖ್ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆ(ಐಐಎಸ್‍ಸಿ) ಯಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿ ಕೆಲಸ ನಿರ್ವಹಿಸಿದ್ದರು.




