ಮಧೂರು: ಶ್ರೀಧರ್ಮಸ್ಥಳ ಶ್ರೀಮಂಜುನಾಥ ಭಜನಾ ಪರಿಷತ್ತು ಇದರ ಸಹಯೋಗದಲ್ಲಿ ನಡೆಯುತ್ತಿರುವ ಭಜನಾ ಅಭಿಯಾನದ 21-22ನೇ ವಾರದ ಭಜನೆ ಕರಂದಕ್ಕಾಡಿನ ಶ್ರೀವಿಶ್ವಕರ್ಮ ಭಜನಾ ಮಂದಿರದಲ್ಲಿ ಧಾರ್ಮಿಕ ಮುಂದಾಳು ವೆಂಕಟ್ರಮಣ ಹೊಳ್ಳ ಕಾಸರಗೋಡು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಂದಿರದ ಸದಸ್ಯ, ಹಿರಿಯ ಸಂಗೀತ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಅವರು ಧಾರ್ಮಿಕ ಉಪನ್ಯಾಸ ನೀಡಿ, ಕಲಿಯುಗದಲ್ಲಿ ಪಾಪಗಳ ಕೊಳೆ ತೊಳೆದು ಭಗವದನುಗ್ರಹ ಪ್ರಾಪ್ತಿಗೆ ದಾಸ ಸಂಕೀರ್ತನೆಯೇ ತಪಸ್ಸಾಗಿದೆ. ಮನೆಯಲ್ಲಿ ಮಾತೆಯರ ಮೂಲಕ ಸಂಕೀರ್ತನಾ ಪರಂಪರೆ ಬೆಳೆದು ಬರಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವೆಂಕಟ್ರಮಣ ಹೊಳ್ಳ ಮಾತನಾಡಿ ವಾರವಾರವೂ ನಡೆಯುತ್ತಿರುವ ಭಜನಾ ಕಾರ್ಯಕ್ರಮ ಜಾಗೃತ ಸಮಾಜದ ಸಂಚಲನಕ್ಕೆ ಕಾರಣವಾಗಿದೆ. ಜನಮಾನಸದಲ್ಲಿ ಭಕ್ತಿಮಾರ್ಗದ ಸಂಸ್ಕøತಿಯೊಂದು ಈ ಮೂಲಕ ಮೂಡಿಬರಲಿದೆ ಎಂದರು.
ಹರಿದಾಸ ಜಯಾನಂದಕುಮಾರ್ ಹೊಸದುರ್ಗ ಆಧ್ಯಾತ್ಮಿಕ ಮೌಲ್ಯ ಪಸರಿಸುವಲ್ಲಿ ಭಕ್ತಿ ಸಂಗೀತದ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿ ಭಕ್ತಿ ಸಂಗೀತ ಪ್ರಸ್ತುತಪಡಿಸಿದರು. ವಿದ್ವಾನ್.ಕಲ್ಮಾಡಿ ಸದಾಶಿವ ಆಚಾರ್ಯ ಅವರಿಗೆ ಗುರುನಮನ ಸಲ್ಲಿಸಲಾಯಿತು. ಬಳಿಕ ನಡೆದ ಭಜನಾ ಸಂಕೀರ್ತನೆಯಲ್ಲಿ ಶ್ರೀಮುತ್ತಪ್ಪ ಮಹಿಳಾ ಭಜನಾ ವೃಂದ ಪಾರೆಕಟ್ಟೆ ಹಾಗೂ ಶ್ರೀಅಯ್ಯಪ್ಪ ಮಹಿಳಾ ಭಕ್ತವೃಂದ ಬೆದ್ರಡ್ಕ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ತುಕಾರಾಮ ಕೆರೆಮನೆ ವಂದಿಸಿದರು. ಸಂಕೀರ್ತನೆಯ ಸಂದರ್ಭ ಪಕ್ಕವಾದ್ಯದಲ್ಲಿ ಉದಯ(ಹಾರ್ಮೋನಿಯಂ), ಹಾಗೂ ತಿರುಮಲೇಶ (ತಬಲಾ) ಸಹಕರಿಸಿದರು. ಮಹಾಪೂಜೆಯ ಬಳಿಕ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

