ಮುಳ್ಳೇರಿಯ: ಪಾತ್ರವೇ ತಾನಾಗಿ ತನ್ಮಯತೆಯಿಂದ ವಿಜೃಂಭಿಸುವ ಅನನ್ಯ ಅರ್ಥಗಾರಿಕೆ ಕೀರಿಕ್ಕಾಡು ವಿಷ್ಣು ಮಾಸ್ತರ್ ಅವರದು ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಬಹುಭಾಷಾ ಪ್ರಸಂಗಕರ್ತ ಡಾ. ಬೆಟ್ಟಂಪಾಡಿ ಸದಾಶಿವ ಭಟ್ ಅವರು ಹೇಳಿದರು.
ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಇತ್ತೀಚೆಗೆ ನಡೆದ 77ನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಕೀರಿಕ್ಕಾಡು ಪ್ರಶಸ್ತಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಸಾಹಿತ್ಯ ಸಂಸ್ಕøತಿಯ ಪೋಷಕ ಸುಭಾಷ್ ರೈ ಕಡಮಜಲು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೀಂಜದ ಸರ್ಕಾರಿ ವೈದ್ಯಾಧಿಕಾರಿ ಡಾ. ಯಂ. ಪ್ರಭಾಕರ ರೈ ಅವರು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಸಂಸ್ಮರಣೆ ಗೈದರು. ಪ್ರಾಂಶುಪಾಲ ವೆಂಕಟರಾಮ ಭಟ್ಟ ಸುಳ್ಯ ಅವರು ಅಭಿನಂದಿಸಿ ಮಾತನಾಡಿದರು. ಮುಖ್ಯ ಅತಿಥಿ ಚಂದ್ರಶೇಖರ ರೈ ಮಂಗಳೂರು ಅವರು ಕಲಾಸಂಘದೊಳಗಿನ ಬಾಲ್ಯದ ಮಧುರ ಸಂಬಂಧವನ್ನು ನೆನಪಿಸಿಕೊಂಡರು. ಪ್ರಾರಂಭದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಯವರ ಅನುಗ್ರಹ ಸಂದೇಶವನ್ನು ವಾಚಿಸಲಾಯಿತು.
ಕಲಾಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಮಂಜೇಶ್ವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗಣಪತಿ ಹವನ, ಗೋಪಾಲಕೃಷ್ಣ ದೇವರ ಪೂಜೆಯೊಂದಿಗೆ ಆರಂಭಗೊಂಡು ವಿದ್ವಾನ್ ವಿ ಬಿ ಹಿರಣ್ಯ ಅವರು ಭಗವದ್ಗೀತೆಯ ವಾಚನ ಮತ್ತು ಪ್ರವಚನವನ್ನು ಮನೋಜ್ಞವಾಗಿ ನೆರವೇರಿಸಿಕೊಟ್ಟರು. ಯಕ್ಷಗಾನ ತಾಳಮದ್ದಳೆ ಪಾರ್ಥಸಾರಥ್ಯವನ್ನು ಸಂಘದ ಕಲಾವಿದರು ಪ್ರಸ್ತುತಪಡಿಸಿದರು. ಸಂಜೆ ಅತಿಥಿ ಕಲಾವಿದರ ಸಮ್ಮಿಲನದೊಂದಿಗೆ ಸಂಘದ ಕಲಾವಿದರ ಕೂಡುವಿಕೆಯಲ್ಲಿ ಕರ್ಣಪರ್ವ ಯಕ್ಷಗಾನ ತಾಳಮದ್ದಳೆ ನೆರವೇರಿತು. ಸರೋಜಿನಿ ಬನಾರಿ ಅವರ ನಿರ್ದೇಶನದಲ್ಲಿ ಭರತನಾಟ್ಯ ಮತ್ತು ಜಾನಪದ ನೃತ್ಯ ಮುಂತಾದ ಕಲಾ ವೈವಿಧ್ಯವು ಪ್ರದರ್ಶನಗೊಂಡಿತು. ಚಂದ್ರಶೇಖರ ಏತಡ್ಕ, ನಾರಾಯಣ ಮಾಸ್ತರ್ ದೇಲಂಪಾಡಿ ಅವರು ಕಾರ್ಯಕ್ರಮ ನಿರೂಪಣೆ ಗೈದರು. ಯಶಸ್ವಿ ಅಡೂರು ಅವರ ಪ್ರಾರ್ಥನೆಯಿಂದ ಮೊದಲ್ಗೊಂಡು ಕೊನೆಯಲ್ಲಿ ರಾಮಯ್ಯ ರೈ ಕಲ್ಲಡ್ಕ ಗುತ್ತು ವಂದಿಸಿದರು.




