ನವದೆಹಲಿ:ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ಹೆಚ್ಚಳವಾಗಿಲ್ಲ ಎಂದು ಕೇಂದ್ರವು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿತು. ಡಿಎಂಕೆ ಸದಸ್ಯ ಎಂ.ಷಣ್ಮುಗನ್ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು ಈ ವಿಷಯವನ್ನು ತಿಳಿಸಿದರು.
ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳು ಹೆಚ್ಚುತ್ತಿವೆಯೇ ಎನ್ನುವುದನ್ನು ತಿಳಿಯಲು ಷಣ್ಮುಗನ್ ಬಯಸಿದ್ದರು.
ಕಳೆದ ಮೂರು ವರ್ಷಗಳಲ್ಲಿ ನಡೆದಿರುವ ಮಾನವ ಹಕ್ಕುಗಳ ಪ್ರಕರಣಗಳ ರಾಜ್ಯವಾರು ಸಂಖ್ಯೆ ಮತ್ತು ಸಂತ್ರಸ್ತರಿಗೆ ಪಾವತಿಸಿರುವ ಪರಿಹಾರಗಳ ವಿವರಗಳನ್ನೂ ಅವರು ಕೇಳಿದ್ದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಲಭ್ಯವಾಗಿಸಿರುವ ಅಂಕಿಅಂಶಗಳಂತೆ ಈ ವರ್ಷದ ಅ.31ರವರೆಗೆ 64,170 ಮಾನವ ಹಕ್ಕುಗಳ ಉಲ್ಲಂಘನೆಗಳು ದಾಖಲಾಗಿವೆ. ಕಳೆದ ಮೂರು ವರ್ಷಗಳಲ್ಲಿ ಇಂತಹ ಪ್ರಕರಣಗಳಲ್ಲಿ ಇಳಿಕೆಯಾಗಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ ರಾಯ್,2018ರಿಂದ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ಸಂತ್ರಸ್ತರಿಗೆ 63.66 ಕೋ.ರೂ.ಗಳನ್ನು ವಿತರಿಸಲಾಗಿದೆ ಎಂದರು.
2021ರಲ್ಲಿ ಗರಿಷ್ಠ 24,242 ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಮತ್ತು ಕನಿಷ್ಠ ಎಂಟು ಪ್ರಕರಣಗಳು ಲಡಾಖ್ನಲ್ಲಿ ದಾಖಲಾಗಿವೆ.