ಮಂಜೇಶ್ವರ: ಶ್ರೇಷ್ಠ ಜನ್ಮವಾದ ಮಾನವ ಜನ್ಮವನ್ನು ಸಾರ್ಥಕಗೊಳಿಸುವ ಚಟುವಟಿಕೆಗಳು ವ್ಯಕ್ತಿಯ ಬದುಕನ್ನು ಉನ್ನತಿಗೊಯ್ಯುತ್ತದೆ. ಕನಸುಗಳನ್ನು ಸಾಕಾರಗೊಳಿಸುವಲ್ಲಿ ಎದುರಾಗುವ ಎಲ್ಲಾ ಸವಾಲುಗಳಿಗೂ ಉತ್ತರಿಸುತ್ತ ಮುಂದುವರಿದಾಗ ಲಕ್ಷ್ಯ ಪ್ರಾಪ್ತಿಯಾಗಿ ಸಾಕಾರತೆಯಲ್ಲಿ ಕೊನೆಗೊಳ್ಳುತ್ತದೆ. ಸರಳ ಸಜ್ಜನಿಕೆಯ ವ್ಯಕ್ತಿತ್ವ ಸಮಷ್ಠಿಯಲ್ಲಿ ನಮ್ಮನ್ನು ಬಲಯುತಗೊಳಿಸುತ್ತದೆ ಎಂದು ಸಂಸ್ಕಾರ ಸಾಹಿತ್ಯ ರಾಜ್ಯ ಅಧ್ಯಕ್ಷ, ಕೇರಳ ಪ್ರದೇಶ್ ಕಾಂಗ್ರೆಸ್ಸ್ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ಯಾಡನ್ ಶೌಕತ್ ತಿಳಿಸಿದರು.
ಸಂಸ್ಕಾರ ಸಾಹಿತಿ ವೇದಿಕೆ ಮಂಜೇಶ್ವರ ಅಸೆಂಬ್ಲಿ ಸಮಿತಿ ನೇತೃತ್ವದಲ್ಲಿ ಹೊಸಂಗಡಿ ವ್ಯಾಪಾರ ಭವನದಲ್ಲಿ ಶುಕ್ರವಾರ ಅಪರಾಹ್ನ ಆಯೋಜಿಸಲಾದ ಪದ್ಮಶ್ರೀ ಪುರಸ್ಕøತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಆಯೋಜಿಸಲಾದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ, ಹಾಜಬ್ಬ ಅವರನ್ನು ಅಭಿನಂದಿಸಿ ಮಾತನಾಡಿದರು.
ಸಂಸ್ಕಾರ, ಸಂಸ್ಕøತಿಗಳು ಪ್ರತಿಯೊಬ್ಬನ ಅಂತರಾಳದಲ್ಲೂ ಪುಟಿದೇಳಬೇಕು. ಸಮಾಜದಲ್ಲಿ ಬದಲಾವಣೆಗಳನ್ನು ಬಯಸುವ ವ್ಯಕ್ತಿ ಪರರ ದೂಶಣೆಯಲ್ಲಿ ತೊಡಗದೆ ಸ್ವತಃ ಪರಿಹಾರಕ್ಕೆ ಧುಮುಕಿದಾಗ ಕ್ರಾಂತಿ ಸೃಷ್ಟಿಯಾಗುತ್ತದೆ. ವ್ಯಕ್ತಿ, ವ್ಯಕ್ತಿತ್ವ, ಸಾಧನೆ, ಸಾಧ್ಯತೆಗಳಿಗೆ ನಮ್ಮಮನ್ನು ನಾವು ತೊಡಗಿಸಿಕೊಳ್ಳುವ ಮೂಲಕ ಹಾಜಬ್ಬರಂತಹ ನೂರಾರು ವ್ಯಕ್ತಿತ್ವಗಳು ನಮ್ಮಲ್ಲಿ ರೂಪುಗೊಳ್ಳಬಹುದಾಗಿದೆ. ಸಮಾಜ ಅಂತವನ್ನು ಬೆಂಬಲಿಸುವ ಮೂಲಕ ಪ್ರಜ್ಞಾವಂತಿಕೆಯ ಬೆಳವಣಿಗೆಗೆ ದಾರಿಮಾಡಿಕೊಡುತ್ತದೆ ಎಂದವರು ತಿಳಿಸಿದರು. ಹಾಜಬ್ಬರ ಜೀವಮಾನದ ಸಾಧನೆ ಜಗತ್ತಿಗೇ ಮಾದರಿ. ಅವರ ಕಾಲಘಟ್ಟದಲ್ಲಿ ನಾವಿರುವುದು ಹೆಮ್ಮೆಮೂಡಿಸುತ್ತದೆ ಎಮದರು.
ಸಂಸ್ಕಾರ ಸಾಹಿತ್ಯದ ಮಂಜೇಶ್ವರ ಅಸೆಂಬ್ಲಿ ಸಮಿತಿ ಅಧ್ಯಕ್ಷ ಸಂಕಬೈಲು ಸತೀಶ್ ಅಡಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾಜಬ್ಬರಂತಹ ವ್ಯಕ್ತಿ ನಿರ್ಮಾಣದಲ್ಲಿ ನಾವು ತೊಡಗಿಸಿಕೊಂಡಾಗ ಅಭಿವೃದ್ದಿ ಹೊಂದಿದ ನೆಮ್ಮದಿಯ ಸಮಾಜ ನಿರ್ಮಾಣವನ್ನು ಸಾಕಾರಗೊಳಿಸಲು ಸಾಧ್ಯವಾಗುವುದು. ಯುವ ಸಮಾಜಕ್ಕೆ ಹಾಜಬ್ಬರ ಸೇವಾ ಚಟುವಟಿಕೆ ಎಂದಿಗೂ ಪಠ್ಯವಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬನವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಯೂನಿವರ್ಸಲ್ ಸ್ವರ್ಣ ಪದಕ ಪ್ರದಾನ ಮಾಡಲಾಯಿತು. ಈ ಸಮಸರ್ಭ ಮಾತನಾಡಿದ ಹಾಜಬ್ಬ ಅವರು ತನ್ನ ಎಲ್ಲಾ ಚಟುವಟಿಕೆಗಳ ಹಿಂದೆ ಸಮಾಜದ ಸಹೃದಯ ವ್ಯಕ್ತಿಗಳು ಅನೇಕರ ನೆರವು ಇದೆ. ಪರಸ್ಪರ ಅರಿತುಕೊಂಡು ಜೊತೆಯಾಗಿ ಸಾಗಿದಾಗ ಯಶಸ್ಸು ಸಾಧ್ಯ ಎಂದರು.
ಜಿಲ್ಲಾ ಕಾಂಗ್ರೆಸ್ಸ್ ಮಾಜೀ ಅಧ್ಯಕ್ಷ ಹಕೀಂ ಕುನ್ನಿಲ್, ಸಂಸ್ಕಾರ ಸಾಹಿತಿ ಜಿಲ್ಲಾ ಕಾರ್ಯದರ್ಶಿ ರಾಘವನ್ ಕುಳಂಗರ, ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಮೊಹಮ್ಮದ್ ಡಿಎಂಕೆ, ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ, ಸಂಸ್ಕಾರ ಸಾಹಿತ್ಯದ ಜಿಲ್ಲಾ ಉಪಾಧ್ಯಕ್ಷ ಕೆ.ವಿ.ರಾಘವನ್ ಮಾಸ್ತರ್, ಖಜಾಂಜಿ ಕೆ.ದಿನೇಶನ್, ಕಾಂಗ್ರೆಸ್ಸ್ ನೇತಾರರಾದ ಧನ್ಯಾ, ಶೇಖ್ ಬಾವಾ, ಲಕ್ಷ್ಮಣ ಪ್ರಭು ಕುಂಬಳೆ, ಮೊಹಮ್ಮದ್ ಮಜಾಲ್, ಇರ್ಷಾದ್ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಸಂಸ್ಕಾರ ಸಾಹಿತ್ಯದ ಮಂಜೇಶ್ವರ ಅಸೆಂಬ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಆರೀಫ್ ಮಚ್ಚಂಪಾಡಿ ಸ್ವಾಗತಿಸಿ, ಖಜಾಂಜಿ ಜಗದೀಶ್ ಮೂಡಂಬೈಲು ವಂದಿಸಿದರು. ಸಂಯೋಜಕ ಹರ್ಷಾದ್ ವರ್ಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ನಿರ್ವಹಿಸಿದರು.
ಗಮನಾರ್ಹ ಅಂಶ:
ಸಮಾರಂಭದಲ್ಲಿ ಉಮರ್ ಮಂಜೇಶ್ವರ ಅವರು ಹರೇಕಳ ಹಾಜಬ್ಬ ಅವರ ಜೀವನಾಧಾರಿತ ಸ್ವರಚಿತ ಕವನವನ್ನು ವಾಚಿಸಿದರು. ಈ ವೇಳೆ ಹಾಜಬ್ಬ ಅವರು ಭಾವಪರವಶರಾಗಿ ಕಣ್ಣೀರುಗೆರೆದು ತಮ್ಮ ಸರಳತೆ, ಮುಗ್ದತೆಯನ್ನು ತೋರಿಸಿದ್ದು ಗಮನ ಸೆಳೆಯಿತು.




