ಕಾಸರಗೋಡು: ಮಂಗಳೂರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ತಂಡದಿಂದ ಬೇರ್ಪಟ್ಟು ನೀರಿಗೆ ಬಿದ್ದಿದ್ದ ತಮಿಳ್ನಾಡು ರಾಮನಾಥಪುರ ನಿವಾಸಿ ಜೋಸೆಫ್(51)ಅವರನ್ನು ಕಾಸರಗೋಡಿನ ಕೀಯೂರಿನಿಂದ ಮೀನುಗಾರರು ರಕ್ಷಿಸಿದ್ದಾರೆ. ಮೂವತ್ತು ತಾಸುಗಳ ಕಾಲ ಮೈಮೇಲೆ ಬಟ್ಟೆಯಿಲ್ಲದೆ, ಸಮುದ್ರದಲ್ಲಿ ಈಜಾಡಿಕೊಂಡು, ಜೀವರಕ್ಷಣೆಗಾಗಿ ಹರಸಾಹಸಪಡುತ್ತಿದ್ದ ಜೋಸೆಫ್ ಅವರನ್ನು ಕಾಸರಗೋಡು ಕೀಯೂರು ಕಡಪ್ಪುರದ ಮೀನುಗಾರರಾದ ದಿನೇಶನ್, ಸೈನೇಶ್, ಸುರೇಶ್ ಎಂಬವರ ತಂಡ ದೋಣಿಗೆ ಹಾಕಿಕೊಂಡು ತಳಂಗರೆ ಬಂದರಿಗೆ ತಲುಪಿಸಿದ್ದಾರೆ. ಅಬೋಧಾವಸ್ಥೆಯಲ್ಲಿದ್ದ ಇವರನ್ನು ಪೊಲೀಸರು ಮತ್ತು ಮೀನುಗಾರರು ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚೇತರಿಸುತ್ತಿದ್ದಂತೆ ಇವರ ಪತ್ನಿಯ ಮೊಬೈಲ್‍ಗೆ ಕರೆಮಾಡಿ, ಮಾಹಿತಿ ನೀಡಲಾಗಿತ್ತು.
'ಆಳ ಸಮುದ್ರದಲ್ಲಿ 30ತಾಸುಗಳ ಕಾಲ ಪ್ರಾಣದ ಹಂಗು ತೊರೆದು ಈಜಾಡುತ್ತಾ, ಇನ್ನೇನು ಪ್ರಾಣಪಕ್ಷಿ ಹಾರಿಹೋಗುವ ಸ್ಥಿತಿ ತಲುಪುತ್ತಿದ್ದಂತೆ ಮೀನುಗಾರರ ತಂಡವೊಂದು ತನ್ನನ್ನು ದೋಣಿಗೆ ಎತ್ತಿಹಾಕಿ ರಕ್ಷಿಸಿದೆ. ಅವರಿಗೆ ಆ ದೇವರು ಒಳಿತು ಮಾಡಲಿ' ಎಂದು ಪ್ರಾಣಾಪಾಯದಿಂದ ಪಾರಾಗಿಬಂದ ಜೋಸೆಫ್ ಗದ್ಗದಿತರಾಗಿ ತಿಳಿಸುತ್ತಾರೆ.
ತಮಿಳ್ನಾಡು ರಾಮನಾಥಪುರ ನಿವಾಸಿ ಜೋಸೆಫ್(51)ಸೇರಿದಂತೆ ಎಂಟು ಮಂದಿಯ ತಂಡ ಡಿ. 31ರಂದು ಮೀನು ಹಿಡಿಯಲು ಸಮುದ್ರಕ್ಕೆ ತೆರಳಿದ್ದು, ಸುಮಾರು 40 ನಾಟಿಕಲ್ ಮೈಲು ದೂರದಲ್ಲಿ ಮೀನಿಗಾಗಿ ಬಲೆ ಹರಡುತ್ತಿದ್ದಂತೆ ಜೋಸೆಫ್ ನಾಪತ್ತೆಯಾಗಿದ್ದರು. ಬಲೆ ಹರಡುವ ಮಧ್ಯೆ ಇವರು ನೀರಿಗೆ ಬಿದ್ದಿರಬೇಕೆಂದು ಸಂಶಯಿಸಲಾಗಿದ್ದು, ಜತೆಗಿದ್ದವರು ತಕ್ಷಣ ಪಾಂಡೇಶ್ವರ ಹಾಗೂ ಕಾಸರಗೋಡು ತಳಂಗರೆಯ ಕರಾವಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಈ ಮಧ್ಯೆ ತಳಂಗರೆಯ ಕರಾವಳಿ ಪೊಲೀಸ್ ಠಾಣೆಯಿಂದ ಎಂಟು ನಾಟಿಕಲ್ ಮೈಲಿ ದೂರದಲ್ಲಿ ಜೋಸೆಫ್ ಪತ್ತೆಯಾಗಿದ್ದರು.

