ಕಾಸರಗೋಡು: ಗಣರಾಜ್ಯೋತ್ಸವದ ಅಂಗವಾಗಿ ಸಚಿವ ಅಹ್ಮದ್ ದೇವರ ಕೋವಿಲ್ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಘಟನೆಗೆ ಸಂಬಂಧ ಕಂದಾಯ ಇಲಾಖೆ ನೀಡಿದ ವರದಿ ಪ್ರಕಾರ ಪೋಲೀಸರಿಂದ ಈ ಲೋಪ ಆಗಿದೆ ಎಂದು ವರದಿ ನೀಡಲಾಗಿದೆ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹಾಗೂ ಹಿರಿಯ ಅಧಿಕಾರಿಗೆ ಕಂದಾಯ ಇಲಾಖೆ ವರದಿ ಹಸ್ತಾಂತರಿಸಿದೆ.
ವರದಿ ಪ್ರಕಾರ ಧ್ವಜಾರೋಹಣಕ್ಕೂ ಮುನ್ನ ಹಗ್ಗ ಬಿಚ್ಚಿದ ಪೋಲೀಸರು ಧ್ವಜವನ್ನು ತಲೆಕೆಳಗಾಗಿ ಸಿದ್ದಪಡಿಸಿದ್ದರು. ವರದಿಯಲ್ಲಿ ಇಬ್ಬರು ಪೋಲೀಸರನ್ನು ಉಲ್ಲೇಖಿಸಲಾಗಿದೆ. ವರದಿ ಪ್ರಕಾರ ಎಆರ್ ಕ್ಯಾಂಪ್ ನ ಗ್ರೇಡ್ ಎಸ್ ಐ ನಾರಾಯಣನ್ ಹಾಗೂ ಸಿಪಿಒ ಬಿಜುಮೋನ್ ವಿರುದ್ದ ಲೋಪ ಆರೋಪ ಹೊರಿಸಲಾಗಿದೆ. ಇದೇ ವೇಳೆ ಇಬ್ಬರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಗಣರಾಜ್ಯೋತ್ಸವದ ಅಂಗವಾಗಿ ಧ್ವಜಸ್ತಂಭವನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಕಂದಾಯ ಇಲಾಖೆ ವ್ಯವಸ್ಥೆ ಮಾಡುತ್ತದೆ. ನಂತರ ಧ್ವಜಾರೋಹಣದ ವ್ಯವಸ್ಥೆ ಪೋಲೀಸರದ್ದಾಗಿದೆ. ಎಲ್ಲವೂ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೂರ್ವಾಭ್ಯಾಸದ ನಂತರ ಧ್ವಜಾರೋಹಣ ಮಾಡಲಾಗುತ್ತದೆ. ಧ್ವಜಾರೋಹಣ ಮಾಡುವಾಗ ಯಾವ ಹಗ್ಗವನ್ನು ಎಳೆಯಬೇಕು ಎಂದು ಹೇಳುವ ಜವಾಬ್ದಾರಿಯೂ ಉಸ್ತುವಾರಿ ಪೋಲೀಸ್ ಅಧಿಕಾರಿಯ ಮೇಲಿರುತ್ತದೆ.
ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಚಿವರು ಧ್ವಜಾರೋಹಣ ನೆರವೇರಿಸಿದರು. ತಲೆ ಕೆಳಗಾಗಿ ಹಾರಾಡುತ್ತಿದ್ದ ಧ್ವಜವನ್ನು ನೋಡಿ ಅವರೊಂದಿಗಿದ್ದ ಸಚಿವರು ಹಾಗೂ ಹಿರಿಯ ಪೋಲೀಸ್ ಅಧಿಕಾರಿಗಳು ಸೆಲ್ಯೂಟ್ ಹೊಡೆದರು. ಧ್ವಜವನ್ನು ತಲೆಕೆಳಗಾಗಿ ಹಾರಿಸಿರುವುದು ಸಚಿವರಿಗಾಗಲಿ, ಇತರ ಪೊಲೀಸ್ ಅಧಿಕಾರಿಗಳಿಗಾಗಲಿ ಗಮನಕ್ಕೆ ಬಂದಿರಲಿಲ್ಲ. ಮಾಧ್ಯಮದವರು ಗಮನಸೆಳೆದ ನಂತರ ಮತ್ತೆ ಲೋಪ ಸರಿಪಡಿಸಿ ಸರಿಯಾಗಿ ಧ್ವಜಾರೋಹಣ ನೆರವೇರಿಸಲಾಯಿತು.

