ಮಂಜೇಶ್ವರ : ಯಕ್ಷಗಾನರಂಗದಲ್ಲಿ ಬದುಕಿನುದ್ದಕ್ಕೂ ಸೇವೆಗೈದು ಇಂದು ನಮ್ಮೊಂದಿಗಿಲ್ಲದ ಹಿರಿಯ ಕಲಾವಿದರನ್ನು ನೆನಪಿಸುವುದು ಯಕ್ಷಗಾನವನ್ನು ಪ್ರೀತಿಸುವ ಗೌರವಿಸುವ ನಮ್ಮ ಕರ್ತವ್ಯ, ಹಿರಿಯರ ಕಲಾಸೇವೆ, ಬದುಕು ,ಅನುಭವ ನಮಗೆ ದಾರಿದೀಪವಾಗಿದೆ. ಆರಾಧನಾ ಹಾಗೂ ಸಾಂಪ್ರದಾಯಿಕ ಕಲೆಯಲ್ಲಿ ಹಿರಿಯಕಲಾವಿದರ ಅನುಭವಸಾರ ಕಲೆಯ ಆರೋಗ್ಯಪೂರ್ಣ ಮುಂದುವರಿಕೆಗೆ ಅತೀ ಅಗತ್ಯಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಅಭಿಪ್ರಾಯ ಪಟ್ಟರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಶ್ರೀ ಅರಸು ಕೃಪಾ ಹವ್ಯಾಸಿ ಯಕ್ಷಗಾನ ಸಂಘ ಉದ್ಯಾವರ ಮಾಡ ಇವರ ಆಶ್ರಯದಲ್ಲಿ ಇತ್ತೀಚೆಗೆ ತಿಯಾ ಸಮಾಜ ಭವನ ಉದ್ಯಾವರ ಮಾಡದಲ್ಲಿ ಜರಗಿದ "ಹಿರಿಯರ ನೆನಪು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದ ಭಾಗವಾಗಿ ಕೀರ್ತಿಶೇಷ ವಾಮನ್ ಮಾಸ್ತರ್ ಉದ್ಯಾವರ ಯಕ್ಷಗಾನ ಅರ್ಥಧಾರಿ, ಕೀರ್ತಿಶೇಷ ಪುರುಷೋತ್ತಮ ದಾಸ್ ಸಂಘದ ಗೌರವಾಧ್ಯಕ್ಷರು, ಕೀರ್ತಿಶೇಷ ಬೊಟ್ಟಿಗೆರೆ ಪುರುಷೋತ್ತಮ ಪೂಂಜ ಹಿರಿಯ ಭಾಗವತ ಹಾಗೂ ಪ್ರಸಂಗಕರ್ತರು ಅವರ ಸಂಸ್ಮರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕ ಯಂ.ನಾ.ಚಂಬಲ್ತಿಮಾರ್ ಮಾತನಾಡಿ, ಭಾರತೀಯ ಸಂಸ್ಕøತಿಯ ಪ್ರಮುಖ ಭಾಗವಾದ ಯಕ್ಷಗಾನ ಕನ್ನಡ ಭಾಷೆಯ ಪ್ರಸಾರ ಹಾಗೂ ಉಳಿಯುವಿಕೆಗೂ ನೀಡಿದ ಕೊಡುಗೆ ಅಪಾರ. ಶುದ್ಧ ಕನ್ನಡ ಭಾಷೆ ಆಡು ಭಾಷೆಯಾಗಿ ಜನರೊಂದಿಗೆ ಉಳಿಯುವಲ್ಲಿ ಯಕ್ಷಗಾನದ ಕೊಡುಗೆ ಗಮನಾರ್ಹ. ಅದರಲ್ಲೂ ಮುಖ್ಯವಾಗಿ ಯಕ್ಷಗಾನದ ಆಡಂಬೋಲವಾದ ಕನ್ನಡನಾಡಿನ ಕರಾವಳಿಯಲ್ಲಿ ಶುದ್ದ ಕನ್ನಡ ಭಾಷೆ ಯಕ್ಷಗಾನರಂಗದಲ್ಲಿ ಆಶು ಸಾಹಿತ್ಯರೂಪದಲ್ಲಿ ಕಂಗೊಳಿಸುತ್ತಿದೆ ಎಂದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ದಾಮೋದರ ಶೆಟ್ಟಿ ಮಾತನಾಡಿ, ಪುರಾಣ ಕತೆಗಳನ್ನು ಜನ ಸಾಮಾನ್ಯರಿಗೂ , ಅನಕ್ಷರಸ್ತರಿಗೂ ತಿಳಿಸುವಲ್ಲಿ ಯಕ್ಷಗಾನದ ಕೊಡುಗೆ ಅಪಾರ, ಯಕ್ಷಗಾನರಂಗಕ್ಕೆ ಮಹತ್ತರ ಕೊಡುಗೆ ನೀಡಿದ ಕೀರ್ತಿ ಶೇಷ ಬೊಟ್ಟಿಗೆರೆ ಪುರುಷೋತ್ತಮ ಪೂಂಜ , ಕೀರ್ತಿಶೇಷ ವಾಮನ್ ಮಾಸ್ತರ್ ಉದ್ಯಾವರ, ಕೀರ್ತಿಶೇಷ ಪುರುಷೋತ್ತಮ ದಾಸ್ ಅವರ ಬದುಕು , ಕೊಡುಗೆ ನಮಗೆ ದಾರಿದೀಪವಾಗಲಿ ಎಂದರು.
ಉದ್ಯಾವರ ಮಾಡ ಶ್ರೀ ದೈವಸ್ಥಳದ ಆಡಳಿತ ಮೊಕ್ತೇಸರ ರಘು ಶೆಟ್ಟಿ ಕುಂಜತ್ತೂರು, ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕೃಷ್ಣ ಶಿವಕೃಪಾ ಕುಂಜತ್ತೂರು ಧಾರ್ಮಿಕ ಮುಂದಾಳು, ಉಮೇಶ ಮಾಡ, ಕೀರ್ತಿ ಶೇಷ ವಾಮನ ಮಾಸ್ತರ್ ಅವರ ಧರ್ಮ ಪತ್ನಿ ಶಾರದ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ಯಾಧರ ಶೆಟ್ಟಿಯವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು.
ಹರೀಶ ಶೆಟ್ಟಿ ಮಾಡ ಸಭಾ ಕಾರ್ಯಕ್ರಮ ನಿರ್ವಹಿಸಿದರು, ಹಾಗೂ ಗಣೇಶ ಕುಂಜತ್ತೂರು ವಂದಿಸಿದರು. ಬಳಿಕ ಸಂಘದ ಸದಸ್ಯರು ಹಾಗೂ ಅತಿಥಿಕಲಾವಿದರ ಕೂಡುವಿಕೆಯಿಂದ ಶ್ರೀಕೃಷ್ಣ ಪರಂಧಾಮ ಯಕ್ಷಗಾನ ತಾಳಮದ್ದಳೆ ಜರಗಿತು.

