ಬದಿಯಡ್ಕ: ಕ್ಯಾಂಪ್ಕೋ ಸಂಸ್ಥೆಯೊಂದಿಗೆ ನಿಕಟ ಸಂಪರ್ಕವನ್ನಿರಿಸಿಕೊಂಡು ಕೃಷಿ ಉತ್ಪನ್ನಗಳ ವಹಿವಾಟನ್ನು ಮಾಡಿದ್ದೇನೆ. ಬದಿಯಡ್ಕದಲ್ಲಿ ಕ್ಯಾಂಪ್ಕೋ ಸಂಸ್ಥೆ ಆರಂಭದಿಂದ ಇಂದಿನ ವರೆಗೂ ನನ್ನ ಮನೆಯ ಅಡಿಕೆ ಬೆಳೆಯನ್ನು ಅಲ್ಲಿಯೇ ವ್ಯಾಪಾರ ಮಾಡಿರುವುದರ ಫಲವಾಗಿ ಇಂದು ಸಂಸ್ಥೆಯು ನನ್ನ ಸಂಕಷ್ಟಕಾಲದಲ್ಲಿ ನೆರವಾಗಿರುವುದು ಮನಸ್ಸಿಗೆ ಮುದವನ್ನು ನೀಡುತ್ತದೆ ಎಂದು ಹಿರಿಯ ಕೃಷಿಕ ಕೈಲಂಕಜೆ ವೆಂಕಟ್ರಮಣ ಭಟ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಇತ್ತೀಚೆಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದ ಹಿನ್ನೆಲೆಯಲ್ಲಿ ಕ್ಯಾಂಪ್ಕೋ ಸದಸ್ಯರಿಗೆ ನೀಡಲಾಗುವ ಸಹಾಯ ಧನವನ್ನು ಅವರು ಪಡೆದುಕೊಂಡು ಮಾತನಾಡುತ್ತಾ ಕ್ಯಾಂಪ್ಕೋ ಕೃಷಿಕರ ಸಂಸ್ಥೆ ಎಂಬುದು ಸಾಬೀತಾಗಿದೆ ಎಂದರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ.ಖಂಡಿಗೆ ರೂ.50000-ದ ಚೆಕ್ ಅನ್ನು ಹಸ್ತಾಂತರಿಸಿದರು. ನಿರ್ದೇಶಕ ಪದ್ಮರಾಜ ಪಟ್ಟಾಜೆ, ಬದಿಯಡ್ಕ ಪ್ರಾಂತೀಯ ಪ್ರಬಂಧಕ ಗಿರೀಶ್ ಇ., ಶಾಖಾ ಪ್ರಬಂಧಕ ದಿನೇಶ್ ಕುಮಾರ್, ಕೃಷಿಕ ಪುರುಷೋತ್ತಮ ಭಟ್ ಮಿಂಚಿನಡ್ಕ ಉಪಸ್ಥಿತರಿದ್ದರು.

