HEALTH TIPS

ಕೊರೊನಾ ಕರ್ಫ್ಯೂ; ಕರಾವಳಿ ಯಕ್ಷಗಾನ ಕಲಾವಿದರ ಬದುಕು ಮತ್ತೆ ಅತಂತ್ರ

              ಮಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ರಾಜ್ಯದಲ್ಲಿ ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿದೆ. ಧಾರ್ಮಿಕ ಕಾರ್ಯಕ್ರಮಗಳು, ಸಭೆ-ಸಮಾರಂಭಗಳಿಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಸರ್ಕಾರದ ಈ ನಿರ್ಧಾರ ಶ್ರಮಿಕ ವರ್ಗಕ್ಕೆ ದೊಡ್ಡ ಹೊಡೆತವನ್ನೇ ನೀಡಿದ್ದರೆ, ಅದರಲ್ಲೂ ಕರಾವಳಿಯ ಕಲಾವಿದರ ಬಾಳನ್ನು ಮತ್ತೆ ಅಧಃಪತನದತ್ತ ದೂಡಿದೆ.

             ನವೆಂಬರ್‌ನಿಂದ ಮಾರ್ಚ್‌ತನಕ ಕರಾವಳಿಯಲ್ಲಿ ನಡೆಯುವ ಯಕ್ಷಗಾನ, ನೇಮೋತ್ಸವಕ್ಕೆ ಸರ್ಕಾರದ ಕರ್ಫ್ಯೂ ಆದೇಶ ದೊಡ್ಡ ಹೊಡೆತ ನೀಡಿದ್ದು, ಕಳೆದ ವರ್ಷಗಳ ಲಾಕ್‌ಡೌನ್‌ನಿಂದ ಅಪಾರ ಕಷ್ಟ ಅನುಭವಿಸಿದ ಕಲಾವಿದರಿಗೆ ಈ ಬಾರಿಯ ವಾರಾಂತ್ಯದ ಕರ್ಫ್ಯೂ, ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
           ಕಳೆದ ಲಾಕ್‌ಡೌನ್‌ನಿಂದ ಸ್ಥಗಿತವಾಗಿದ್ದ ಹಲವು ದೇವಸ್ಥಾನಗಳ ಬ್ರಹ್ಮಕಲಶೋತ್ಸವದ, ವಾರ್ಷಿಕ ಉತ್ಸವ ಕಾರ್ಯಗಳು ಈ ಬಾರಿ ಮಾಡುವುದಕ್ಕೆ ದೇವಸ್ಥಾನಗಳ ಆಡಳಿತ ಮಂಡಳಿ, ಗ್ರಾಮಸ್ಥರು ನಿರ್ಧಾರ ಮಾಡಿದ್ದರು. ಆದರೆ ಸರ್ಕಾರ ಈಗ ಮತ್ತೆ ಸೆಮಿ ಲಾಕ್‌ಡೌನ್ ಘೋಷಣೆ ಮಾಡಿದ್ದು, ಭಕ್ತರಿಗೆ ನಿರಾಸೆ ಮೂಡಿಸಿದೆ. ಹಲವು ದೇವಸ್ಥಾನಗಳಲ್ಲಿ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿದ್ದು, ಇದೀಗ ಉತ್ಸವಗಳನ್ನು ನಡೆಸಲು ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಹೀಗಾಗಿ ಸದ್ಯ ದಿನಾಂಕವನ್ನು ಮುಂದೂಡಲಾಗಿದೆ.
            ಉತ್ಸವಗಳ ಪರಿಸ್ಥಿತಿ ಈ ರೀತಿಯಾದರೆ, ಇನ್ನು ಯಕ್ಷಗಾನ ಕಲಾವಿದರ ಬದುಕು ಮತ್ತೆ ಅನಿಶ್ಚಿತತೆಯತ್ತ ದೂಡಿದೆ. ಕಳೆದ ಎರಡು ವರ್ಷಗಳಲ್ಲಿ ಲಾಕ್‌ಡೌನ್ ಬರೆಯಿಂದ ಕಂಗೆಟ್ಟಿದ್ದ ಕಲಾವಿದರಿಗೆ ಈ ಬಾರಿ ಯಕ್ಷಗಾನ ಆರಂಭದ ಹೊತ್ತಲ್ಲೇ ಸರ್ಕಾರ ಮತ್ತೆ ನೈಟ್‌ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ನಿಯಮ ಹಾಕಿದೆ. ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಕರಾವಳಿ ಭಾಗದಲ್ಲಿ ಅಲ್ಲಲ್ಲಿ ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ನೇಮೋತ್ಸವ, ಕಂಬಳ, ಯಕ್ಷಗಾನ ಸೇರಿದಂತೆ ಹಲವು ಉತ್ಸವಗಳು ನಡೆಯುತ್ತವೆ. ಈ ಹಿನ್ನಲೆಯಲ್ಲಿ ಈಗಾಗಲೇ ಹಲವು ಕಾರ್ಯಕ್ರಮಗಳು ನಿಗದಿಯಾಗಿದೆ. ಯಕ್ಷಗಾನ ಕಾರ್ಯಕ್ರಮಗಳು ಕರಾವಳಿಯಾದ್ಯಾಂತ ಈಗಾಗಲೇ ನಿಗದಿಯಾಗಿದ್ದವು.
              ಆದರೆ ಸರ್ಕಾರದ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂನಿಂದಾಗಿ ಹಲವು ಕಾರ್ಯಕ್ರಮಗಳು ರದ್ದಾಗಿವೆ. ರಾತ್ರಿ ಇಡೀ ನಡೆಯುತ್ತಿದ್ದ ಯಕ್ಷಗಾನ ಕಾರ್ಯಕ್ರಮಗಳು ಈಗ ಕಾಲಮಿತಿಯಲ್ಲಿ ನಡೆಯುತ್ತಿದೆ. ರಾತ್ರಿ 9.30ರವರೆಗೆ ನಡೆಸಲು ಅವಕಾಶ ನೀಡಲಾಗಿದ್ದು, ಆದರೆ ಕಾಲಮಿತಿ ಇರುವುದರಿಂದ ಜನರೂ ಸೇರುತ್ತಿಲ್ಲ. ಹೀಗಾಗಿ ಯಕ್ಷಗಾನ ನೋಡುವುದಕ್ಕೆ ಜನರೂ ಬರುತ್ತಿಲ್ಲ. ಇದರಿಂದ ಯಕ್ಷಗಾನ ಆಯೋಜಕರು ಕಾರ್ಯಕ್ರಮ ಮುಂದೂಡಿದ್ದಾರೆ. ಇದರ ನೇರ ಹೊಡೆತ ಈಗ ಕಲಾವಿದರ ಹೊಟ್ಟೆಯ ಮೇಲೆ ಬಿದ್ದಿದೆ. ಆರು ತಿಂಗಳ ಯಕ್ಷಗಾನ ಪ್ರದರ್ಶನವನ್ನೇ ನಂಬಿ ಜೀವನ ಮಾಡುತ್ತಿದ್ದ ಕಲಾವಿದರಿಗೆ ಸರ್ಕಾರದ ಕರ್ಫ್ಯೂ ಬಡತನದ ಮೇಲೆ ಸವಾರಿ ಮಾಡಿದಂತಾಗಿದೆ. ಯಕ್ಷಗಾನ ರದ್ದಾಗುತ್ತಿರುವ ಹಿನ್ನಲೆಯಲ್ಲಿ ಕಲಾವಿದರು ಮತ್ತೆ ಹೊಟ್ಟೆಗೆ ತಣ್ಣೀರು ಬಟ್ಟೆ ಸುತ್ತಿ ಮಲಗುವಂತಾಗಿದೆ.
               ಕಳೆದ ಲಾಕ್‌ಡೌನ್ ಸಂದರ್ಭದಲ್ಲಿ ಯಕ್ಷಗಾನ ನಿಂತು ಹೋದಾಗ, ಜೀವನ ನಡೆಸಲು ಕಲಾವಿದರು ಕೂಲಿ ಕೆಲಸಕ್ಕೆ ತೆರಳಿದ್ದರು. ಕಲಾ ಮಾತೆಯನ್ನು ಅಪ್ಪಿದ ಪರಿಣಾಮ ಬದುಕು ಕೂಲಿ ಕೆಲಸದತ್ತ ಹೊರಳಿಸಿತ್ತು. ಆದರೆ‌ ಕಲಾಮಾತೆ ಮತ್ತೆ ಕೈ ಹಿಡಿಯುವ ಸಂದರ್ಭದಲ್ಲಿ ಮತ್ತೆ ಸರ್ಕಾರದ ಕರ್ಫ್ಯೂ ಹೊಡೆತ ನೀಡಿದೆ. ಕಲಾವಿದರು ಮತ್ತೆ ಕೂಲಿ‌ ಕೆಲಸದತ್ತ ಹೊರಡುವಂತಾಗಿದೆ. ಒಟ್ಟಿನಲ್ಲಿ ರಾಜ ಪೋಷಾಕುವಿನೊಂದಿಗೆ ರಂಗದಲ್ಲಿ ರಾಜನಾಗಬಲ್ಲ, ವೈಯಾರದಿಂದ ರಾಣಿಯಾಗಬಲ್ಲ, ಮಾತಿನಿಂದಲೇ ವಿದೂಷಕನಾಗಬಲ್ಲ, ನೋವನ್ನು ಬಣ್ಣದಿಂದ ಮುಚ್ಚಿ ಹಾಸ್ಯಗಾರನಾಗಬಲ್ಲ ಯಕ್ಷಗಾನ ಕಲಾವಿದ, ಈಗ ಸರ್ಕಾರದ ಮಿನಿ ಲಾಕ್‌ಡೌನ್ ಎಂಬ ಛಡಿ ಏಟಿಗೆ ಮತ್ತೆ ಗುರಿಯಾಗಿದ್ದಾನೆ. ಬಡವನ ಬಡತನದ ಭೀಕರತೆ, ಕೊರೊನಾದ ತೀವ್ರತೆಗಿಂತ ನಾಲ್ಕು ಪಟ್ಟು ಹೆಚ್ಚು ಇರುತ್ತದೆ ಅನ್ನುವುದನ್ನು ಸರ್ಕಾರ ಮನಗಾಣಬೇಕಿದೆ.


           

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries