ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯಾದ್ಯಂತ ಪಿಯುಸಿ, ಪದವಿ, ಪಿಜಿ ತರಗತಿಗಳಿಗೆ ನೀಡಲಾಗಿದ್ದ ರಜೆಯನ್ನು ಫೆ.16 ವರೆಗೆ ವಿಸ್ತರಿಸಲಾಗಿದೆ.
ರಜೆ ವಿಸ್ತರಣೆಯ ಬಗ್ಗೆ ಕರ್ನಾಟಕ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಕಾಲೇಜುಗಳಿಗೆ ಘೋಷಣೆ ಮಾಡಲಾಗಿದ್ದ ರಜೆಯನ್ನು ವಿಸ್ತರಣೆ ಮಾಡಲಾಗಿದ್ದು, ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ತಿಳಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.
ಕರ್ನಾಟಕ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಫೆ.11 ರಂದು ಜಿಲ್ಲಾಧಿಕಾರಿಗಳು, ಎಸ್.ಪಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಹಿಜಾಬ್ ವಿವಾದ ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದ್ದು ಶಾಲೆಗಳನ್ನು ಪ್ರಾರಂಭಿಸುವುದಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಮುಂದಿನ ಆದೇಶದ ವರೆಗೂ ಶಾಲೆಗೆ ಬರುವ ವಿದ್ಯಾರ್ಥಿಗಳು ಕೇಸರಿ ಶಾಲು/ ಹಿಜಾಬ್ ಧರಿಸಿ ಬರುವಂತಿಲ್ಲ ಎಂದು ಹೈಕೋರ್ಟ್ ಸೂಚಿಸಿದೆ.

