HEALTH TIPS

ಪತಂಜಲಿ ಮಾಲೀಕತ್ವದ ರುಚಿ ಸೋಯಾ ಎಫ್‌ಪಿಓ ಆರಂಭ

            ನವದೆಹಲಿ: ಪತಂಜಲಿ ಆಯುರ್ವೇದ ಸಮೂಹದ ಒಡೆತನದಲ್ಲಿರುವ ರುಚಿ ಸೋಯಾ ಇಂಡಸ್ಟ್ರೀಸ್‌ನ ಹೆಚ್ಚುವರಿ ಷೇರು ವಿತರಣೆ (ಎಫ್‌ಪಿಒ) ಪ್ರಕ್ರಿಯೆಯು ಗುರುವಾರ ಆರಂಭವಾಗಿದೆ. ಸಂಸ್ಥೆಯ ಮೇಲೆ ಸಾಂಸ್ಥಿಕ ಹೂಡಿಕೆದಾರರು ₹ 1,290 ಕೋಟಿ ಬಂಡವಾಳ ಹೂಡಿದ್ದಾರೆ.

           ಗುರುವಾರ ಇಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪತಂಜಲಿ ಸಂಸ್ಥೆಯ ಮುಖ್ಯಸ್ಥ, ಯೋಗಗುರು ಬಾಬಾ ರಾಮದೇವ್, ಪತಂಜಲಿ ಸಂಸ್ಥೆಯು ರುಚಿ ಸೋಯಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಆಹಾರೋದ್ಯಮ ಕ್ಷೇತ್ರವನ್ನು ಗುರಿಯಾಗಿಸಿ ಸೇವೆ ಸಲ್ಲಿಸಲಿದೆ. ಖಾದ್ಯ ತೈಲವೂ ಒಳಗೊಂಡಂತೆ ವಿವಿಧ ಆಹಾರೋತ್ಪನ್ನಗಳ ಉತ್ಪಾದನೆಗೆ ಒತ್ತು ನೀಡಲಿದೆ ಎಂದು ಹೇಳಿದರು.

ಪತಂಜಲಿ ಸಂಸ್ಥೆಯು ಯೋಗ, ಆರೋಗ್ಯ, ಕಾಸ್ಮೆಟಿಕ್ಸ್‌ ಉತ್ಪನ್ನಗಳಲ್ಲದೆ, ಇದೀಗ ಸಾರ್ವಜನಿಕರ ಬೇಡಿಕೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ದಿನಬಳಕೆಯ ವಸ್ತುಗಳ ಉತ್ಪನ್ನ ಮತ್ತು ಮಾರುಕಟ್ಟೆಗೆ ಆದ್ಯತೆ ನೀಡಲಿದೆ ಎಂದೂ ಅವರು ವಿವರಿಸಿದರು.

              'ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಕಾರಣದಿಂದಾಗಿ ಷೇರು ಮಾರುಕಟ್ಟೆ ಜಾಗತಿಕವಾಗಿ ಕುಸಿತ ಕಂಡಿದೆ. ಆದರೆ, ಈ ಕುಸಿತದ ನಡುವೆಯೂ ನಮ್ಮ ಸಂಸ್ಥೆಯು ಷೇರು ಮಾರುಕಟ್ಟೆ ಪ್ರವೇಶಿಸುತ್ತಿದೆ. ವಿದೇಶೀ ಮೂಲದ ಆಹಾರೋತ್ಪನ್ನ ಕಂಪೆನಿಗಳನ್ನೇ ಅವಲಂಬಿಸಿದ್ದರಿಂದ ದೇಶ ದುಷ್ಪರಿಣಾಮ ಎದುರಿಸಿದೆ. ಬೇರೆ ದೇಶಗಳ ನಡುವೆ ಯುದ್ಧ ನಡೆದರೂ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಉಂಟಾಗಬಾರದು ಎಂಬುದು ಪತಂಜಲಿ ಮತ್ತು ರುಚಿ ಸೋಯಾ ಸಂಸ್ಥೆಯ ಉದ್ದೇಶವಾಗಿದೆ' ಎಂದು ಅವರು ಹೇಳಿದರು.

               ರುಚಿ ಸೋಯಾ ಕಂಪೆನಿ ಮತ್ತು ಅದರ 22 ಅಡುಗೆ ಎಣ್ಣೆ ಘಟಕಗಳನ್ನು ಪತಂಜಲಿ ಕಂಪನಿಯು 2018ರ ಡಿಸೆಂಬರ್‌ನಲ್ಲಿ ಹರಾಜು ಪ್ರಕ್ರಿಯೆ ಮೂಲಕ ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ಸಂಸ್ಥೆಯು ಮುಂದಿನ 5 ವರ್ಷಗಳಲ್ಲಿ ಆಹಾರ ಮತ್ತು ಕೃಷಿ ಕ್ಷೇತ್ರದ ನಂಬರ್ ಒನ್ ಸಂಸ್ಥೆಯಾಗಿ ಹೊರಹೊಮ್ಮಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

                 ಪ್ರಮುಖವಾಗಿ ರುಚಿ ಸೋಯಾ ಸಂಸ್ಥೆಯ ಫಾಲೋ ಆನ್ ಪಬ್ಲಿಕ್ ಆಫರಿಂಗ್‌ (ಎಫ್‌ಪಿಓ)ಗೆ ಮೊದಲೇ, ಸಾಂಸ್ಥಿಕ ಹೂಡಿಕೆದಾರರು ₹ 1,290 ಕೋಟಿ ಬಂಡವಾಳವನ್ನು ಹೂಡಿಕೆ ಮಾಡಿದ್ದಾರೆ. ಪ್ರತಿ ಷೇರಿಗೆ ₹ 650ರಂತೆ 1,98,43,153 ಈಕ್ವಿಟಿ ಷೇರುಗಳನ್ನು ಸಾಂಸ್ಥಿಕ ಹೂಡಿಕೆದಾರರಿಗೆ ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.

         ದಿವಾಳಿಯ ಅಂಚಿಗೆ ತಲುಪಿದ್ದ ರುಚಿ ಸೋಯಾ ಕಂಪೆನಿಯ ಮೇಲಿರುವ ₹ 3,300 ಕೋಟಿ ಸಾಲವನ್ನು ಹಂತಹಂತವಾಗಿ ಮರುಪಾವತಿ ಮಾಡಲಾಗುವುದು. ದೇಶದ ಅತಿದೊಡ್ಡ ಅಡುಗೆ ಎಣ್ಣೆ ಕಂಪೆನಿಯಾಗಿದ್ದ ರುಚಿ ಸೋಯಾ ಮತ್ತೆ ಷೇರು ಮಾರುಕಟ್ಟೆ ಪ್ರವೇಶಿಸಲಿದೆ. ಈ ಕಂಪೆನಿಯ ಎಫ್‌ಪಿಓ ಷೇರುಗಳ ಬೆಲೆ ₹ 615ರಿಂದ ₹ 650 ಇರಲಿದೆ ಎಂದು ಬಾಬಾ ರಾಮದೇವ್‌ ವಿವರ ನೀಡಿದರು.

               ಮುಂಬರುವ ದಿನಗಳಲ್ಲಿ ರುಚಿ ಸೋಯಾ ಮತ್ತು ಪತಂಜಲಿ ಆಹಾರ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಮಾಡುವ ಉದ್ದೇಶ ಹೊಂದಲಾಗಿದೆ. ಯಾವುದೇ ಉತ್ಪನ್ನಗಳ ಬೆಲೆಯನ್ನು ನಿಗದಿಪಡಿಸುವಾಗ ಗ್ರಾಹಕರ ಬೇಡಿಕೆ ಮತ್ತು ಸಂಸ್ಥೆಯ ವಹಿವಾಟು ಪರಿಗಣಿಸಿ ಸಮತೋಲಿತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries