ಭಾರತದ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ, ಪ್ರಮುಖವಾಗಿ ಮುಸ್ಲಿಮರ ಮೇಲೆ ದಾಳಿಗಳಿಗೆ ವಿವಿಧ ಕಡೆಗಳಿಂದ ನೀಡಲಾಗುತ್ತಿರುವ ಬಹಿರಂಗ ಕರೆಗಳ ಹಿನ್ನೆಲೆಯಲ್ಲಿ ಭಾರತದ ವಿವಿಧೆಡೆಗಳ ಪತ್ರಕರ್ತರು ಹಾಗೂ ಮಾಧ್ಯಮ ಕ್ಷೇತ್ರದ ಗಣ್ಯರು ಭಾರತದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳಿಗೆ ತಮ್ಮ ಸಾಂವಿಧಾನಿಕ ಉತ್ತರದಾಯಿತ್ವವನ್ನು ಎತ್ತಿ ಹಿಡಿಯಲು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ದ್ವೇಷದ ವೈಭವೀಕರಣ ಕಳೆದ ಕೆಲ ವರ್ಷಗಳು ಹಾಗೂ ತಿಂಗಳುಗಳಿಂದ ಹೆಚ್ಚಾಗುತ್ತಿದೆ. ಕೆಲವೊಮ್ಮೆ ಚುನಾವಣೆ ಸಂದರ್ಭದಲ್ಲಿ ಹಾಗೂ ಇನ್ನು ಕೆಲವೊಮ್ಮೆ ರಾಜಕೀಯ ಸಭೆಗಳಲ್ಲಿ, ಧರ್ಮ ಸಂಸದ್ ಎಂದು ಕರೆಯಲಾಗುವ ಸಭೆಗಳಲ್ಲಿ, ಧರಿಸುವ ಉಡುಗೆಯ ವಿಚಾರದಲ್ಲಿ ಅಥವಾ ಒಂದು ಚಲನಚಿತ್ರ ಪ್ರದರ್ಶನದ ವಿಚಾರದಲ್ಲೂ ಇದು ನಡೆಯುತ್ತಿದೆ.
ಹಿಂಸೆಗೆ ನೀಡಲಾಗುವು ಕರೆಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗುತ್ತಿದ್ದರೂ ದೇಶದ ಉನ್ನತ ನಾಯಕರು ಲೆಕ್ಕಾಚಾರಿತ ಮೌನ ವಹಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಕೋವಿಡ್-19 ನೆಪದಲ್ಲಿ ಮುಸ್ಲಿಮರನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿದ್ದನ್ನು ಹಾಗೂ ಅವರ ಸಾಮಾಜಿಕ ಆರ್ಥಿಕ ಬಹಿಷಕಾರಕ್ಕೆ ಶಾಸಕರು ನೀಡಿದ್ದನ್ನೂ ನಾವು ಗಮನಿಸಿದ್ದೇವೆ. ದಿಗಿಲು ಹುಟ್ಟಿಸುವ ರೀತಿಯಲ್ಲಿ `ಕೊರೋನಾ ಜಿಹಾದ್' ಎಂಬ ಪದವನ್ನೂ ಹುಟ್ಟುಹಾಕಿ ಕೆಲ ಮಾಧ್ಯಮಗಳು ವೈಭವೀಕರಿಸಿವೆ.
ಒಂದು ಸಮುದಾಯವನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಬಹಿಷ್ಕರಿಸಬೇಕು ಎಂಬ ಕರೆ ನೀಡುವುದು ಅಥವಾ ಆ ಸಮುದಾಯದ ವಿರುದ್ಧ ಹಿಂಸೆಗೆ ಕರೆ ನೀಡುವುದು ವಾಕ್ ಸ್ವಾತಂತ್ರ್ಯದ ವಿಚಾರದಲ್ಲಿ ಸಾಂವಿಧಾನಿಕ ರಕ್ಷಣೆ ಹೊಂದಿಲ್ಲ ಆದರೆ ಕೇಂದ್ರದ ಉನ್ನತ ನಾಯಕರು ಹಾಗೂ ಹಲವು ರಾಜ್ಯಗಳ ನಾಯಕರು ಈ ಕುರಿತಂತೆ ಯಾವುದೇ ರೀತಿಯಲ್ಲಿ ತಮ್ಮ ಸಾಂವಿಧಾನಿಕ ಬದ್ಧತೆ ನಿರ್ವಹಿಸಲು ಮುಂದೆ ಬಂದಿಲ್ಲ. ಪೊಲೀಸರೂ ಈ ಪ್ರಕರಣಗಳನ್ನು ಒಂದೋ ಗಣನೆಗೆ ತೆಗೆದುಕೊಳ್ಳುವುದಿಲ್ಲ ಅಥವಾ ಕಠಿಣವಲ್ಲದ ನಿಬಂಧನೆಗಳಡಿಯಲ್ಲಿ ಪ್ರಕರಣ ದಾಖಲಿಸುತ್ತಾರೆ.
ದ್ವೇಷದ ಭಾಷಣಗಳಿಗೆ ಮಾಧ್ಯಮದ ಕೆಲ ವರ್ಗಗಳಿಂದಲೂ ಪ್ರೋತ್ಸಾಹ ದೊರೆಯುತ್ತಿರುವುದರಿಂದ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ನ್ಯೂಸ್ ಬ್ರಾಡ್‍ಕಾಸ್ಟರ್ಸ್ ಎಂಡ್ ಡಿಜಿಟಲ್ ಅಸೋಸಿಯೇಶನ್, ಪತ್ರಕರ್ತರ ಸಂಘಟನೆಗಳು ತುರ್ತಾಗಿ ಈ ಕುರಿತು ಗಮನ ಹರಿಸಬೇಕಿದೆ.
ಮುಸ್ಲಿಮರ ವಿನಾಶಕ್ಕೆ ಡಿಸೆಂಬರ್ 21ರಿಂದ ಕರೆ ನೀಡಲಾಗುತ್ತಿದ್ದು ಆ ತಿಂಗಳು ಹರಿದ್ವಾರದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಇದು ಆರಂಭಗೊಂಡಿದೆ. 2021-22ರಲ್ಲಿ ಸಾಮಾಜಿಕ ಜಾಲತಣದಲ್ಲಿ ಹಾಗೂ ಬುಲ್ಲಿ ಬಾಯಿ ಆಯಪ್ ಮೂಲಕ ಮುಸ್ಲಿಂ ಮಹಿಳೆಯರನ್ನು ಟಾರ್ಗೆಟ್ ಮಾಡಲಾಗಿದೆ. ಕರ್ನಾಟಕದ ಹಿಜಾಬ್ ವಿವಾದ ಕೂಡ ಮುಸ್ಲಿಂ ಮಹಿಳೆಯರು ಹಲವೆಡೆ ಕಿರುಕುಳಕ್ಕೊಳಗಾಗುವುದಕ್ಕೆ ಆಸ್ಪದ ನೀಡಿದೆ.
ಫೆಬ್ರವರಿ-ಮಾರ್ಚ್ 2022ರ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಕೂಡ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುವುದು ಮುಂದುವರಿದಿದ್ದು ಆಡಳಿತ ಪಕ್ಷದ ತಾರಾ ಪರ್ರಚಾರಕೆನಿಸಿಕೊಂಡವರು ಧರ್ಮದ ಆಧಾರದಲ್ಲಿ ಮತ ಯಾಚಿಸಿ ಲಜ್ಜೆಗಟ್ಟು ಕಾನೂನು ಮುರಿದಿದ್ದಾರೆ. ಚುನಾವಣಾ ಆಯೋಗವೂ ಕ್ರಮಕೈಗೊಳ್ಳುವ ಗೋಜಿಗೆ ಹೋಗಿಲ್ಲ.
ತೀರಾ ಇತ್ತೀಚೆಗೆ, ಕಾಶ್ಮೀರ ಪಂಡಿತರು ಪಟ್ಟ ಯಾತನೆಯನ್ನು ಬಿಂಬಿಸುವ ಚಿತ್ರವೆಂದು ಹೇಳಿಕೊಂಡು ಅವರ ಯಾತನೆಯ ಲಾಭ ಪಡೆಯುವ `ದಿ ಕಾಶ್ಮೀರ ಫೈಲ್ಸ್' ಚಿತ್ರದ ಮೂಲಕ ಮುಸ್ಲಿಮರ ವಿರುದ್ಧ ದ್ವೇಷ ಬಿತ್ತುವ ಕೆಲಸ ನಡೆಯುತ್ತಿದೆ.
ಇವುಗಳನ್ನೆಲ್ಲಾ ಬಳಸಿಕೊಂಡು ʼಹಿಂದು ಧರ್ಮ ಅಪಾಯದಲ್ಲಿದೆʼ ಎಂಬ ಭಾವನೆಯನ್ನು ಮೂಡಿಸುವ ಹಾಗೂ ಭಾರತದ ಮುಸ್ಲಿಮರು ಇಲ್ಲಿನ ಹಿಂದುಗಳಿಗೆ ಅಪಾಯಕಾರಿ ಎಂಬ ಭಾವನೆ ಮೂಡಿಸಲು ಯತ್ನಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಭಾರತದ ಸಾಂವಿಧಾನಿಕ ಸಂಸ್ಥೆಗಳು, ಪ್ರಮುಖವಾಗಿ ರಾಷ್ಟ್ರಪತಿಗಳು, ನ್ಯಾಯಾಂಗ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿರುವವರು ಮತ್ತು ಚುನಾವಣಾ ಆಯೋಗ ಸಂವಿಧಾನದತ್ತ ರೀತಿಯಲ್ಲಿ ತಮ್ಮ ಕರ್ತವ್ಯ ನಿಭಾಯಿಸಬೇಕು ಹಾಗೂ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಅರಿತು ತಮ್ಮ ಸ್ವಾತಂತ್ರ್ಯವನ್ನು ಎತ್ತಿ ಹಿಡಿದು ಅಧಿಕಾರಸ್ಥರ ಮುಂದೆ ವಾಸ್ತವವನ್ನು ಬಿಂಬಿಸುವ ಧೈರ್ಯ ತೋರಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ದಿ ಹಿಂದೂ ಪಬ್ಲಿಷಿಂಗ್ ಗ್ರೂಪ್‌ನ ಮಾಜಿ ಪ್ರಧಾನ ಸಂಪಾದಕ ಎನ್. ರಾಮ್, ಹಿರಿಯ ಪತ್ರಕರ್ತ ಮತ್ತು ಲೇಖಕ ಮೃಣಾಲ್ ಪಾಂಡೆ, ದಿ ಟೆಲಿಗ್ರಾಫ್ ನ ಸಂಪಾದಕ ಆರ್. ರಾಜಗೋಪಾಲ್, ಕಾರವಾನ್ ನ ಎಕ್ಸಿಕ್ಯೂಟಿವ್ ಎಡಿಟರ್ ವಿನೋದ್ ಜೋಸ್, ಫ್ರಂಟ್ ಲೈನ್‌ನ ಸಂಪಾದಕ ಆರ್. ವಿಜಯಶಂಕರ್, ಸತ್ಯಹಿಂದಿ ಚೇರ್‌ಮ್ಯಾನ್ ಕ್ಯೂ.ಡಬ್ಲ್ಯೂ ನಖ್ವಿ, ದಿ ವೈರ್ ನ ಸ್ಥಾಪಕ ಸಂಪಾದಕ ಸಿದ್ದಾರ್ಥ್ ವರದರಾಜನ್ ಸೇರಿದಂತೆ ಹಲವು ಪತ್ರಕರ್ತರು ಈ ಮನವಿ ಮಾಡಿದ್ದಾರೆ.





