ಮುಂಬೈ: ಮಹಾರಾಷ್ಟ್ರಕ್ಕೂ ಕೊರೋನಾ ರೂಪಾಂತರಿ ಒಮಿಕ್ರಾನ್ ನ ಉಪತಳಿಗಳು ಎಂಟ್ರಿಯಾಗಿವೆ. ಇದೇ ಮೊದಲ ಬಾರಿಗೆ ನಾಲ್ವರು ರೋಗಿಗಳಲ್ಲಿ ಒಮಿಕ್ರಾನ್ ನ ಉಪ ತಳಿ B.A.4 ಮತ್ತು ಮೂವರಲ್ಲಿ B.A.5 ಕಂಡುಬಂದಿವೆ ಎಂದು ಮಹಾರಾಷ್ಟ್ರ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಸೋಂಕಿತರೆಲ್ಲರೂ ಕೇವಲ ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದು, ಎಲ್ಲರಿಗೂ ಮನೆಯಲ್ಲೇ ಚಿಕಿತ್ಸೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಸಂಪೂರ್ಣ ಜೀನೋಮ್ ಅನುಕ್ರಮವನ್ನು ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ ನಡೆಸಿದೆ ಮತ್ತು ಅದರ ಸಂಶೋಧನೆಯನ್ನು ಫರಿದಾಬಾದ್‌ನಲ್ಲಿರುವ ಭಾರತೀಯ ಜೈವಿಕ ದತ್ತಾಂಶ ಕೇಂದ್ರವು ದೃಢಪಡಿಸಿದೆ. ಪುಣೆಯಲ್ಲಿ ಪತ್ತೆಯಾದ ಏಳು ಕೊರೋನಾ ಸೋಂಕಿತರಲ್ಲಿ ಒಮಿಕ್ರಾನ್ ನ ಉಪ ತಳಿಗಳು ಪತ್ತೆಯಾಗಿರುವುದು ದೃಢವಾಗಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ.
ನಾಲ್ವರು ರೋಗಿಗಳು B.A.4 ರೂಪಾಂತರದ ಸೋಂಕನ್ನು ಹೊಂದಿದ್ದಾರೆ, ಇತರರು B.A. 5 ಸೋಂಕಿಗೆ ಒಳಗಾಗಿದ್ದಾರೆ. ಅವರಲ್ಲಿ ನಾಲ್ವರು ಪುರುಷರು ಮತ್ತು ಮೂವರು ಮಹಿಳೆಯರು. ನಾಲ್ವರು ರೋಗಿಗಳು 50 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಇಬ್ಬರು 20 ರಿಂದ 40 ವಯಸ್ಸಿನವರು. ಮತ್ತೊಬ್ಬರು ಒಂಬತ್ತು ವರ್ಷದ ಮಗು ಎಂದು ತಿಳಿಸಿದ್ದಾರೆ.
ಎಲ್ಲಾ ಆರು ವಯಸ್ಕರು ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದಿದ್ದು, ಒಬ್ಬರು ಬೂಸ್ಟರ್ ಡೋಸ್ ಸಹ ತೆಗೆದುಕೊಂಡಿದ್ದಾರೆ. ಮಗುವಿಗೆ ಲಸಿಕೆ ಹಾಕಲಾಗಿಲ್ಲ. ಅವರೆಲ್ಲರೂ COVID-19 ನ ಸೌಮ್ಯ ಲಕ್ಷಣಗಳನ್ನು ಹೊಂದಿದ್ದರು ಮತ್ತು ಮನೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಅವರ ಮಾದರಿಗಳನ್ನು ಮೇ 4 ಮತ್ತು ಮೇ 18 ರ ನಡುವೆ ತೆಗೆದುಕೊಳ್ಳಲಾಗಿತ್ತು. ಅವರಲ್ಲಿ ಇಬ್ಬರು ದಕ್ಷಿಣ ಆಫ್ರಿಕಾ ಮತ್ತು ಬೆಲ್ಜಿಯಂಗೆ ಪ್ರಯಾಣಿಸಿದ್ದರೆ, ಮೂವರು ಕೇರಳ ಮತ್ತು ಕರ್ನಾಟಕಕ್ಕೆ ಪ್ರಯಾಣಿಸಿದ್ದರು. ಇತರ ಇಬ್ಬರು ರೋಗಿಗಳಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇರಲಿಲ್ಲ ಎಂದಿದ್ದಾರೆ.
ಓಮಿಕ್ರಾನ್‌ನ ಉಪ-ವಂಶಾವಳಿಗಳು ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದ ಕೆಲವು ಭಾಗಗಳಲ್ಲಿ ಕಂಡುಬಂದಿವೆ.

