ನವದೆಹಲಿ: ಹಿರಿಯ ರಾಜಕಾರಣಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಬೇಸರವಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಬಗ್ಗೆ ಅವರು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ರಾಜೀನಾಮೆ ಪತ್ರ ನೋಡಿ ಬೇಸರವಾಗಿದೆ. ಅವರೇ ಕಳೆದ 5 ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಹಾಗೇ ಪಕ್ಷ ಕೂಡ ಅವರಿಗೆ ನಿರೀಕ್ಷೆಗೂ ಮೀರಿ ಅವಕಾಶಗಳನ್ನು ನೀಡಿದೆ ಎಂದು ಹೇಳಿದ್ದಾರೆ.
ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ಒಗ್ಗಟ್ಟಿನಿಂದ ಕೆಲಸ ಮಾಡುವ ಸಂದರ್ಭದಲ್ಲಿ ಅವರು ಪಕ್ಷ ಬಿಡುತ್ತಿರುವುದು ಸರಿಯಲ್ಲ, ಇದರಿಂದ ಕೋಮುವಾದಿ ಶಕ್ತಿಗಳಿಗೆ ಪರೋಕ್ಷ ಸಹಕಾರ ನೀಡಿದಂತಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಮೇಲೆ ಟೀಕೆ ಮಾಡಿರುವುದು ಸರಿಯಲ್ಲ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಿಮ್ಮ ಸಲಹೆ ಸೂಚನೆ ಪಡೆದ ನಂತರವೇ ಅವರು ಮುಂದುವರೆಯುತ್ತಿದ್ದರು.
ಪ್ರಸ್ತುತ ವಾತಾವರಣದಲ್ಲಿ ಕೋಮುವಾದಿ ಆಡಳಿತ ಸಂವಿಧಾನದ ಆಶಯಗಳು, ಅಲ್ಪಸಂಖ್ಯಾತರ ಮೇಲೆ ಹಾಗೂ ದೀನ ದಲಿತರ ಮೇಲೆ ಹಲ್ಲೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅವರ ಪರವಾಗಿ ನಿಂತಿದೆ. ಇಂತಹ ಸಂದರ್ಭದಲ್ಲಿ ನೀವು ಪಕ್ಷ ತೊರೆಯುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಪಕ್ಷ 3,500 ಕಿ.ಮೀ. ಪಾದಯಾತ್ರೆ ಆಯೋಜಿಸಲಾಗುತ್ತಿದೆ. ಈ ವೇಳೆ ನೀವು ಇಲ್ಲದಿರುವುದನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.





