ನವದೆಹಲಿ: ಅಮೆರಿಕದ ವೆಬ್ಸೈಟ್ `ವೆಸ್ಟ್ ನ್ಯೂಸ್'ನ ಪತ್ರಕರ್ತ ಅಂಗದ್ ಸಿಂಗ್ ರನ್ನು ದಿಲ್ಲಿ ವಿಮಾನ ನಿಲ್ದಾಣದಿಂದ ಗಡೀಪಾರು ಮಾಡಲಾಗಿದೆ ಎಂದು ಅವರ ತಾಯಿ ಹೇಳಿರುವುದಾಗಿ ವರದಿಯಾಗಿದೆ.
ಅಮೆರಿಕದ ಪ್ರಜೆಯಾಗಿರುವ ತನ್ನ ಪುತ್ರ ಅಂಗದ್ ಸಿಂಗ್ ಪಂಜಾಬ್ನಲ್ಲಿರುವ ತನ್ನನ್ನು ಭೇಟಿಯಾಗಲು ನ್ಯೂಯಾರ್ಕ್ನಿಂದ ೧೮ ಗಂಟೆ ವಿಮಾನ ಪ್ರಯಾಣದ ಮೂಲಕ ದಿಲ್ಲಿ ತಲುಪಿದ್ದ.
ಆದರೆ ಆತನನ್ನು ತಡೆದ ಅಧಿಕಾರಿಗಳು, ನ್ಯೂಯಾರ್ಕ್ಗೆ ತೆರಳುವ ವಿಮಾನದಲ್ಲಿ ಆತನನ್ನು ಕುಳ್ಳಿರಿಸಿ ವಾಪಾಸು ಕಳಿಸಿದ್ದಾರೆ. ಹೀಗೆ ಮಾಡಲು ಕಾರಣವನ್ನೂ ಅಧಿಕಾರಿಗಳು ತಿಳಿಸಿಲ್ಲ ಎಂದು ಪತ್ರಕರ್ತನ ತಾಯಿ ಗುರ್ಮೀತ್ ಕೌರ್ ಫೇಸ್ಬುಕ್ನಲ್ಲಿ ಹೇಳಿಕೆ ಪೋಸ್ಟ್ ಮಾಡಿದ್ದಾರೆ.
ಆತನ ಪ್ರಶಸ್ತಿ ಪುರಸ್ಕೃತ ಪತ್ರಿಕೋದ್ಯಮವು ಅಧಿಕಾರಿಗಳನ್ನು ಹೆದರಿಸಿದೆ. ಆತ ಬರೆದ ಲೇಖನಗಳು, ಆತನ ಬರವಣಿಗೆ ಸಾಮರ್ಥ್ಯ, ತಾಯ್ನಾಡಿನ ಮೇಲಿನ ಆತನ ಪ್ರೀತಿಯನ್ನು ಅವರು ಸಹಿಸಲಾರರು ಎಂದು ತನಗೆ ತಿಳಿದಿದೆ ಎಂದು ಗುರ್ಮೀತ್ ಹೇಳಿದ್ದಾರೆ.
ಶಹೀನ್‌ಭಾಗ್ ಪ್ರತಿಭಟನೆಯ ವಿಷಯದಲ್ಲಿ ಅಂಗದ್ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದರು. ಬಹುಷಃ ಈ ವಿಷಯದಲ್ಲಿ ಸರಕಾರಕ್ಕೆ ಅಸಮಾಧಾನ ಇದ್ದಿರಬಹುದು. ಭಾರತದಲ್ಲಿ ದಲಿತರ ಕುರಿತು ಸಾಕ್ಷ್ಯಚಿತ್ರವನ್ನು ನಿರ್ಮಿಸಲು ಪತ್ರಕರ್ತರಾಗಿ ವೀಸಾ ನೀಡಬೇಕೆಂಬ ಆತನ ಕೋರಿಕೆಯನ್ನು ಇತ್ತೀಚೆಗೆ ಸರಕಾರ ತಿರಸ್ಕರಿಸಿತ್ತು ಎಂದು ಅಂಗದ್ ಕುಟುಂಬದ ಸದಸ್ಯರನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಭಾರತದಲ್ಲಿ ಕೊರೋನ ಸೋಂಕಿನ ೨ನೇ ಅಲೆಯ ಬಗ್ಗೆ `ವೆಸ್ಟ್‌ನ್ಯೂಸ್' ನಿರ್ಮಿಸಿದ ಸಾಕ್ಷ್ಯಚಿತ್ರವು ಎಮ್ಮೀ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿತ್ತು. ಈ ಯೋಜನೆಯಲ್ಲಿ ಸಿಂಗ್ ಅವರೂ ಪಾಲ್ಗೊಂಡಿದ್ದರು.





