ನವದೆಹಲಿ:ಹೈಸ್ಪೀಡ್ 5ಜಿ ಸೇವೆ ಮುಂದಿನ ಎರಡು ಮೂರು ವರ್ಷಗಳ ಒಳಗಾಗಿ ದೇಶದ ಬಹುತೇಕ ಎಲ್ಲೆಡೆ ಲಭ್ಯವಾಗಲಿದೆ ಹಾಗೂ ಇದು ಕೈಗೆಟುಕುವ ದರದಲ್ಲಿರುತ್ತದೆ ಎಂದು ಕೇಂದ್ರ ದೂರಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ದೂರಸಂಪರ್ಕ ಮೂಲಸೌಕರ್ಯವನ್ನು ತ್ವರಿತವಾಗಿ ಕಲ್ಪಿಸಲು ಅನುವಾಗುವ 5ಜಿ ರೈಟ್-ಆಫ್-ವೇ ಅಪ್ಲಿಕೇಶನ್ ಪೋರ್ಟೆಲ್ (5G right-of-way application portal) ಬಿಡುಗಡೆ ಮಾಡಿ ಅವರು ಮಾತನಾಡಿದರು.
ಭಾರತದಲ್ಲಿ ಮೊಬೈಲ್ ಸೇವೆಗಳು ಇಡೀ ವಿಶ್ವದಲ್ಲೇ ಅತ್ಯಂತ ಅಗ್ಗ. ಈ ಪ್ರವೃತ್ತಿ 5ಜಿಯಲ್ಲಿ ಕೂಡಾ ಮುಂದುವರಿಯುವ ನಿರೀಕ್ಷೆ ಇದೆ ಎಂದು ಹೇಳಿದರು.
ದೂರಸಂಪರ್ಕ ವಲಯದಲ್ಲಿ 2.5 ರಿಂದ 3 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. 3 ಲಕ್ಷ ಕೋಟಿ ದೊಡ್ಡ ಹೂಡಿಕೆ. ಇದು ಉತ್ತಮ ಉದ್ಯೋಗಾವಕಾಶವನ್ನೂ ಸೃಷ್ಟಿಸಲಿದೆ. ನಮ್ಮ ಅಂದಾಜಿನಂತೆ 5ಜಿ, ದೇಶದ ಬಹುತೇಕ ಭಾಗಗಳನ್ನು ಮುಂದಿನ 2-3 ವರ್ಷಗಳಲ್ಲಿ ತಲುಪಲಿದೆ ಎಂದು ಹೇಳಿದರು.
ದೂರಸಂಪರ್ಕ ಕಂಪನಿಗಳು ಮೂಲಸೌಕರ್ಯ ಸಿದ್ಧಪಡಿಸುತ್ತಿದ್ದು, 5ಜಿ ಸೇವೆಗಳನ್ನು ಅಕ್ಟೋಬರ್ ವೇಳೆಗೆ ಆರಂಭಿಸಲಾಗುತ್ತದೆ. ಬಳಿಕ ತ್ವರಿತವಾಗಿ ವಿಸ್ತರಿಸಲಾಗುತ್ತದೆ ಎಂದು ವಿವರಿಸಿದರು.
ಸರ್ಕಾರ ಈಗಾಗಲೇ ಹೊಸ ರೈಟ್ ಆಫ್ ವೇ ನಿಯಮಾವಳಿಯ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ಟೆಲಿಕಾಂ ಕೇಬಲ್‍ಗಳನ್ನು ಹಾಕಲು ವಿಧಿಸುವ ಶುಲ್ಕದ ಬಗ್ಗೆ, ವಿದ್ಯುತ್ ಕಂಬ ಮತ್ತು ಆವರಣ ಗೋಡೆಯನ್ನು ಅಂದಾಜಿಸುವ ಸಂಬಂಧ ಸ್ಪಷ್ಟನೆ ಇದೆ ಎಂದು ಸ್ಪಷ್ಟಪಡಿಸಿದರು ಎಂದು ವರದಿ,





