ವಾರಂಗಲ್: ತೆಲಂಗಾಣದಲ್ಲಿ ಕಾಕತೀಯರ ಕಾಲದ ಪುರಾತನ ಶಿವ ದೇವಾಲಯವನ್ನು ಶಾಲಾ ಕಟ್ಟಡಕ್ಕಾಗಿ ಧ್ವಂಸಗೊಳಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಇಲ್ಲಿನ ಖಾನಾಪುರ ಮಂಡಲದ ಅಶೋಕ ನಗರದಲ್ಲಿ ಈ ಘಟನೆ ನಡೆದಿದೆ. 800 ವರ್ಷಗಳ ಇತಿಹಾಸವಿರುವ ದೇವಾಲಯವನ್ನು ಧ್ವಂಸ ಮಾಡಿರುವುದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತಿಹಾಸಕಾರರು ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ.
ಸರ್ಕಾರಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ಭೂಮಿಯನ್ನು ಸಮತಟ್ಟು ಮಾಡುವ ವೇಳೆ ಜೆಸಿಬಿ ಬಳಸಿ ಶಿವ ದೇವಾಲಯವನ್ನು ನೆಲಸಮಗೊಳಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಈ ದೇವಾಲಯ 13ನೇ ಶತಮಾನದ ಕಾಕತೀಯರ ದೊರೆ ಗಣಪತಿದೇವನ ಕಾಲದಲ್ಲಿ ನಿರ್ಮಾಣವಾಗಿತ್ತು. ದೇವಾಲಯದಲ್ಲಿ ಕ್ರಿ.ಶ. 1231ರಲ್ಲಿ ಬರೆದ ಏಳು ಸಾಲುಗಳ ತೆಲುಗು ಶಾಸನವಿತ್ತು. ಅದರಲ್ಲಿ ರಾಜನನ್ನು 'ಮಹಾರಾಜ' ಮತ್ತು 'ರಾಜಾಧಿರಾಜುಲು' ಎಂದು ಕರೆಯಲಾಗಿತ್ತು. ಇದನ್ನು 1965ರಲ್ಲಿ ರಾಜ್ಯದ ಪುರಾತತ್ವ ಮತ್ತು ಮುಜರಾಯಿ ಇಲಾಖೆಗೆ ಸೇರಿಸಲಾಗಿತ್ತು.
ಜಿಲ್ಲಾಡಳಿತದ ಸ್ಪಷ್ಟನೆ ಮತ್ತು ಮರು ನಿರ್ಮಾಣ ಭರವಸೆ...
ಸಾರ್ವಜನಿಕರ ಪ್ರತಿಭಟನೆ ಮತ್ತು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರಕ್ಕೆ ಕೆಲವರು ದೂರು ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ದೇವಾಲಯವನ್ನು ಮರು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದೆ.
ಉದ್ದೇಶಪೂರ್ವಕವಾಗಿ ದೇವಾಲಯವನ್ನು ಧ್ವಂಸ ಮಾಡಿಲ್ಲ. 30 ಎಕರೆ ಜಾಗದಲ್ಲಿ ಪೊದೆಗಳನ್ನು ಸ್ವಚ್ಛಗೊಳಿಸುವಾಗ ಶಿಥಿಲಗೊಂಡ ದೇವಾಲಯ ಧ್ವಂಸವಾಗಿದೆ. ಆದರೆ ಇದು ಅಧಿಕೃತವಾಗಿ ರಕ್ಷಿತ ಸ್ಮಾರಕ ಎಂದು ದಾಖಲಾಗಿರಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಾರಂಗಲ್ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ದೇವಾಲಯವನ್ನು ಮರು ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

