ನವದೆಹಲಿ:ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣ್ಯನ್ ಅವರನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF)ಯಲ್ಲಿ ಭಾರತೀಯ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಸಚಿವಾಲಯ ಪ್ರಕಟಿಸಿದೆ.
ಸುಬ್ರಹ್ಮಣ್ಯನ್ ಅವರು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (Indian School of Business)ನಲ್ಲಿ ಪ್ರಾಧ್ಯಾಪಕರು. ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿ ಇದನ್ನು ಅನುಮೋದಿಸಿದ್ದು, ಐಎಂಎಫ್‍ನಲ್ಲಿ ಭಾರತದ ಕಾರ್ಯನಿರ್ವಾಹಕ ನಿರ್ದೇಶಕರಾಗಿ 2022ರ ನವೆಂಬರ್ 1ರಿಂದ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶ ನೀಡುವವರೆಗೆ ಇವರು ಮುಂದುವರಿಯಲಿದ್ದಾರೆ. ಹಾಲಿ ಈ ಹುದ್ದೆಯಲ್ಲಿರುವ ಡಾ.ಸುರ್ಜೀತ್ ಎಸ್.ಭಲ್ಲಾ ಅವರ ಅಧಿಕಾರಾವಧಿ 2022ರ ಅಕ್ಟೋಬರ್ 31ಕ್ಕೆ ಕೊನೆಗೊಳ್ಳಲಿದೆ. ಅವರು 2019ರ ಅಕ್ಟೋಬರ್ ನಲ್ಲಿ ಈ ಹುದ್ದೆಗೇರಿದ್ದರು.
ಆಯಾ ದೇಶಗಳನ್ನು ಪ್ರತಿನಿಧಿಸುವ ಗವರ್ನರ್‌ಗಳಿಂದ ಚುನಾವಣೆಯ ಮೂಲಕ ಕಾರ್ಯ ನಿರ್ವಾಹಕ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ. ಕಾರ್ಯ ನಿರ್ವಾಹಕ ನಿರ್ದೇಶಕರ ಮುಂದಿನ ಅವಧಿ 2022ರ ನವೆಂಬರ್ 1ರಿಂದ ಆರಂಭವಾಗಲಿದ್ದು, ಆಗಸ್ಟ್ 29ರ ಮುನ್ನ ಇದಕ್ಕೆ ನಾಮನಿರ್ದೇಶನ ಮಾಡಬೇಕಾಗುತ್ತದೆ. ಚುನಾವಣೆ ಅಕ್ಟೋಬರ್ 14ರಂದು ನಡೆಯಲಿದೆ. ಭಲ್ಲಾ 2019ರ ನವೆಂಬರ್ 9ರಂದು ಐಎಂಎಫ್ ಆಡಳಿತ ಮಂಡಳಿಯನ್ನು ಸೇರಿದ್ದರು.
ಮುಖ್ಯ ಆರ್ಥಿಕ ಸಲಹೆಗಾರರಾಗಿ ಮೂರು ವರ್ಷಗಳ ಅವಧಿ ಪೂರೈಸಿದ ಸುಬ್ರಹ್ಮಣ್ಯನ್ ಅವರನ್ನು ಕ್ಷೇತ್ರದ ಗವರ್ನರ್ ಆಗಿ ನೇಮಿಸಲಾಗಿದೆ. ಇವರ ಅಧಿಕಾರಾವಧಿ 2022ರ ನವೆಂಬರ್ 1ರಿಂದ ಆರಂಭವಾಗುತ್ತದೆ. ಐಎಂಎಫ್‍ನಲ್ಲಿ 24 ನಿರ್ದೇಶಕರಿದ್ದು, ಇವರನ್ನು ಕಾರ್ಯನಿರ್ವಾಹಕ ನಿರ್ದೇಶಕರು ಎಂದು ಕರೆಯಲಾಗುತ್ತದೆ. ಸದಸ್ಯರಾಷ್ಟ್ರಗಳು ಇವರನ್ನು ಚುನಾಯಿಸುತ್ತವೆ ಎಂದು newindianexpress.com ವರದಿ ಮಾಡಿದೆ.





