ನವದೆಹಲಿ:ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ(Justice NV Ramana) ಅವರ ಅವಧಿಯ ಕೊನೆಯ ದಿನ ಅವರಿಗೆ ವಿದಾಯ ಹೇಳುವಾಗ ಹಿರಿಯ ವಕೀಲ ದುಷ್ಯಂತ್ ದವೆ ಭಾವೋದ್ವೇಗಕ್ಕೊಳಗಾದರು.
"ನೀವು ಜನರ ನ್ಯಾಯಾಧೀಶರಾಗಿದ್ದೀರಿ. ಇಂದು ನನ್ನ ಭಾವನೆಗಳನ್ನು ಅದುಮಿಡಲು ನನಗೆ ಸಾಧ್ಯವಾಗುತ್ತಿಲ್ಲ. ದಿಟ್ಟತನದಿಂದ ನೀವು ನಿಮ್ಮ ಕರ್ತವ್ಯ ನಿಭಾಯಿಸಿದ್ದೀರಿ. ನೀವು ಹಕ್ಕುಗಳನ್ನು, ಸಂವಿಧಾನವನ್ನು ಎತ್ತಿ ಹಿಡಿದಿದ್ದೀರಿ. ನೀವು ಈ ನ್ಯಾಯಾಲಯದ ಜವಾಬ್ದಾರಿಯನ್ನು ಜಸ್ಟಿಸ್ ಲಲಿತ್ ಮತ್ತು ಜಸ್ಟಿಸ್ ಕೊಹ್ಲಿ(Justice Lalit, Justice Kohli) ಅವರಿಗೆ ವಹಿಸಿ ತೆರಳುತ್ತಿದ್ದೀರಿ. ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ" ಎಂದು ಅವರು ಹೇಳಿದರು.
ಜಸ್ಟಿಸ್ ರಮಣ ಅವರು ಎಲ್ಲರ ನಿರೀಕ್ಷೆಗೂ ಮೀರಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ದವೆ ಹೇಳಿದರು.
"ನೀವು ಎಲ್ಲವನ್ನೂ ಸಮತೋಲನದಿಂದ ನಿರ್ವಹಿಸಿದ್ದೀರಿ ಹಾಗೂ ದಿಟ್ಟತನದಿಂದ ಮತ್ತು ಸಂಸ್ಥೆಗೆ ಮತ್ತು ವಕೀಲರೊಂದಿಗೆ ಅತ್ಯಂತ ಸೌಜನ್ಯದಿಂದ ಕಾರ್ಯನಿರ್ವಹಿಸಿದ್ದೀರಿ. ನೀವು ಈ ದೇಶಕ್ಕೆ ಅದ್ಭುತವಾದ ಸಂವಿಧಾನಿಕ ನೈತಿಕತೆ ನೀಡಿದ್ದೀರಿ. ನೀವು ಅಧಿಕಾರ ವಹಿಸಿಕೊಂಡ ಸಂದರ್ಭ, ಎಲ್ಲವೂ ಕಳೆದು ಹೋಯಿತು ಎಂದು ಬರೆದಿದ್ದೆ. ನಾನು ನಿರಾಶಾವಾದಿಯಾಗಿದ್ದಿರಬಹುದು. ಆದರೆ ನೀವು ಕರ್ತವ್ಯ ನಿರ್ವಹಿಸಿದ ರೀತಿ ಹಾಗೂ ಈಗ ನ್ಯಾಯಾಲಯವನ್ನು ಜಸ್ಟಿಸ್ ಲಲಿತ್ ಅವರಂತಹ ಮಹಾನ್ ವ್ಯಕ್ತಿಯ ಕೈಯ್ಯಲ್ಲಿ ನೀಡಿರುವುದಕ್ಕೆ ನನಗೆ ಅತೀವ ಸಮಾಧಾನವಿದೆ" ಎಂದು ಅವರು ಹೇಳಿದರು.





