HEALTH TIPS

ಪಶ್ಚಿಮಘಟ್ಟ: ಅಧ್ಯಯನಕ್ಕೆ ಹೊಸ ಸಮಿತಿ ಅಭಿವೃದ್ಧಿಯ ವೇಗಕ್ಕೆ ಹಾಕೀತೇ ಮಿತಿ?

 

                ಕಸ್ತೂರಿ ರಂಗನ್‌ ಸಮಿತಿಯ ವರದಿಯನ್ನು ಕೇಂದ್ರ ಸರ್ಕಾರ ಕೊನೆಗೂ ತಾನಾಗಿಯೇ ಮೂಲೆ ಗೊತ್ತಿದೆ. ಪಶ್ಚಿಮಘಟ್ಟಗಳ ಪರಿಸರಸೂಕ್ಷ್ಮ ಪ್ರದೇಶಗಳ ಸಂರಕ್ಷಣೆಗೆ ಸಂಬಂಧಿಸಿದ ಶಿಫಾರಸುಗಳ ಸುತ್ತ ಸೃಷ್ಟಿಯಾಗಿರುವ ವಿವಾದಗಳ ಕುರಿತು ಅಧ್ಯಯನ ನಡೆಸಿ, ವರದಿ ಸಲ್ಲಿಸುವ ಜವಾಬ್ದಾರಿಯನ್ನು ಕೇಂದ್ರ ಅರಣ್ಯ ಸಚಿವಾಲಯದ ನಿಕಟಪೂರ್ವ ಮಹಾನಿರ್ದೇಶಕ ಸಂಜಯ್‌ ಕುಮಾರ್‌ ನೇತೃತ್ವದ ಸಮಿತಿಗೆ ಕೇಂದ್ರ ಸರ್ಕಾರವು ವಹಿಸಿದೆ.

                ಅಲ್ಲಿಗೆ, ಜೀವಸಮೃದ್ಧಿಯ ಈ ಘಟ್ಟ ಪ್ರದೇಶಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು ಅದೆಷ್ಟು ಸಡಿಲ ಇರಬೇಕು ಎಂಬ ಬಗ್ಗೆ ವರದಿ ನೀಡಲು ಮೂರನೆಯ ಸಮಿತಿ ಅಸ್ತಿತ್ವಕ್ಕೆ ಬಂದಂತಾಯಿತು. ಹನ್ನೆರಡು ವರ್ಷಗಳ ಹಿಂದೆ ಡಾ. ಮಾಧವ ಗಾಡ್ಗೀಳ್‌ ಅಧ್ಯಕ್ಷತೆಯ ಸಮಿತಿಯೊಂದು ಆರು ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿ ಪಶ್ಚಿಮಘಟ್ಟಗಳ ದೀರ್ಘ ಭವಿಷ್ಯದ ದೃಷ್ಟಿಯಿಂದ ಕೆಲವೊಂದು ಸಂರಕ್ಷಣಾ ಕ್ರಮಗಳನ್ನು ಸೂಚಿಸಿತ್ತು. ಅವೆಲ್ಲವೂ ತೀರ ಬಿಗಿಯಾದ ಕಟ್ಟುಪಾಡುಗಳೆಂದೂ ಗಾಡ್ಗೀಳ್‌ ಸಮಿತಿಯ ಶಿಫಾರಸುಗಳ ಅನುಷ್ಠಾನ ಕಷ್ಟಸಾಧ್ಯವೆಂದೂ ರಾಜ್ಯ ಸರ್ಕಾರಗಳು ಹೇಳಿದ್ದರಿಂದ ಅದನ್ನು ಕೈಬಿಟ್ಟು ಬಾಹ್ಯಾಕಾಶ ವಿಜ್ಞಾನಿ ಡಾ. ಕಸ್ತೂರಿ ರಂಗನ್‌ ಅವರ ನೇತೃತ್ವದ ಎರಡನೇ ಸಮಿತಿಯನ್ನು ನೇಮಕ ಮಾಡಿತ್ತು.

              ಗಾಡ್ಗೀಳ್‌ ವರದಿಗೆ ಹೋಲಿಸಿದರೆ ಈ ವರದಿ ಸಾಕಷ್ಟು ದುರ್ಬಲವೆಂದು ಸಂರಕ್ಷಣಾವಾದಿಗಳು ಮತ್ತು ಪರಿಸರ ಪ್ರೇಮಿಗಳು ವಾದಿಸಿದರೂ ಘಟ್ಟಪ್ರದೇಶಗಳ ಮೇಲಿನ ಒತ್ತಡಗಳನ್ನು ಪ್ರತಿಬಂಧಿ ಸಲು ಒಂದಿಷ್ಟಾದರೂ ಕ್ರಮಗಳು ಜಾರಿಗೆ ಬಂದೀ ತೆಂದು ಆಶಿಸಿದ್ದರು. ಆದರೆ ಆಗಿದ್ದೇ ಬೇರೆ. ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳು ಕಸ್ತೂರಿ ರಂಗನ್‌ ಸಮಿತಿಯ ಶಿಫಾರಸುಗಳನ್ನೂ ಒಪ್ಪಿಕೊಳ್ಳಲು ನಿರಾಕರಿಸಿದವು. ಇಡೀ ಸಮೀಕ್ಷೆಯೇ ಉಪಗ್ರಹ ಚಿತ್ರಗಳನ್ನು ಆಧರಿಸಿದ್ದರಿಂದ ಜನವಸತಿಯ ಪ್ರದೇಶಗಳನ್ನೂ ಅರಣ್ಯವೆಂದೇ ತಪ್ಪಾಗಿ ಗುರುತಿಸಲಾಗಿತ್ತೆಂದು ವಿಶೇಷವಾಗಿ ಕೇರಳ ಸರ್ಕಾರ ಈ ಎರಡನೇ ಸಮೀಕ್ಷೆಯಲ್ಲಿ ಕೆಲವು ತಿದ್ದುಪಡಿಗಳನ್ನು ಸೂಚಿಸಿತ್ತು.

          ಆದರೆ ಕೇರಳ, ಕರ್ನಾಟಕ ಸರ್ಕಾರ ಮಾತ್ರ ಇಡೀ ಸಮೀಕ್ಷೆಯೇ ಅಭಿವೃದ್ಧಿ ವಿರೋಧಿಯೆಂದೂ ಇದನ್ನು ಒಪ್ಪಿಕೊಂಡರೆ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರು ರಸ್ತೆ, ನೀರು, ವಿದ್ಯುತ್‌ ಸೌಲಭ್ಯಗಳಿಂದ ವಂಚಿತರಾದಾರೆಂದೂ ವಾದಿಸಿ ಕಸ್ತೂರಿ ರಂಗನ್‌ ವರದಿಯ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿತು. ಕೇಂದ್ರ ಸರ್ಕಾರವೇನೋ ರಾಜ್ಯಗಳ ಮನವೊಲಿಸಿ ವರದಿಯ ಶಿಫಾರಸುಗಳನ್ನು ಜಾರಿಗೆ ತರಲೆಂದು ಅದಕ್ಕೆ ಸಂಬಂಧಿಸಿದ ಅಧಿಸೂಚನೆಗಳನ್ನು ಹೊರಡಿಸುವ ದಿನಾಂಕವನ್ನು ಮತ್ತೆ ಮತ್ತೆ ಮುಂದೂಡುತ್ತಲೇ ಬಂದಿತ್ತು.

               ಕಳೆದ ಡಿಸೆಂಬರ್‌ನಲ್ಲಿ ಅಂತಿಮ ಗಡುವು ಮುಗಿದರೂ ರಾಜ್ಯ ಸರ್ಕಾರಗಳು ಕಸ್ತೂರಿ ರಂಗನ್‌ ವರದಿ ಬೇಡವೇ ಬೇಡವೆಂದು ಪಟ್ಟು ಹಿಡಿದಿದ್ದರಿಂದ ಈಗ ಅನಿವಾರ್ಯವಾಗಿ ಮತ್ತೊಂದು ಅಧ್ಯಯನಕ್ಕೆಂದು ಮೂರನೆಯ ಸಮಿತಿಯ ಮೊರೆ ಹೋಗಿದೆ. ಇದು, ಪಶ್ಚಿಮಘಟ್ಟಗಳ ನಿಸರ್ಗ ಸಂಪತ್ತನ್ನು ಭವಿಷ್ಯಕ್ಕಾಗಿ ಕಾಪಾಡಿಕೊಳ್ಳಬೇಕೆಂಬ ಮೂಲ ಉದ್ದೇಶವನ್ನೇ ಇನ್ನಷ್ಟು ದುರ್ಬಲಗೊಳಿಸುವತ್ತ ಇಡುವ ಹೊಸ ಹೆಜ್ಜೆಯಾಗದಿರಲಿ.

            ಪಶ್ಚಿಮಘಟ್ಟಗಳ ಜೀವಪರಿಸರ ಇಡೀ ಜಗತ್ತಿನ ಅಮೂಲ್ಯ ಆಸ್ತಿಯೆಂದೂ ಇಲ್ಲಿನ ದಟ್ಟ ಅರಣ್ಯ ಮತ್ತು ಗುಡ್ಡ ಕಣಿವೆಗಳು ದಕ್ಷಿಣ ಭಾರತದ ಜಲ-ವಾಯು ಸಮತೋಲನದ ಮೂಲಸೆಲೆಯೆಂದೂ ಎಂದೋ ಒಪ್ಪಿಕೊಂಡಾಗಿದೆ. ಈಗೀಗ ಬಂದೆರಗುತ್ತಿರುವ ಹವಾಗುಣ ಸಂಕಟಗಳಿಂದ ದೇಶದ ಈ ಭಾಗದ ಜೀವಸಂಕುಲಗಳನ್ನು ಪಾರುಮಾಡುವಲ್ಲಿ ಈ ಘಟ್ಟ ಪ್ರದೇಶಗಳ ಪಾತ್ರ ದಿನದಿನಕ್ಕೆ ಮಹತ್ವದ್ದಾಗುತ್ತಿದೆಯೆಂಬುದೂ ನಿರ್ವಿವಾದ. ಆದರೆ ಈಚಿನ ದಶಕಗಳಲ್ಲಿ ಇಲ್ಲಿ ಮನುಷ್ಯರ ಹೆಜ್ಜೆಗುರುತುಗಳು ದೊಡ್ಡದಾಗುತ್ತಿವೆ, ದಟ್ಟವಾಗುತ್ತಿವೆ.

                 ಅರಣ್ಯ ಅತಿಕ್ರಮಣ, ಹೆದ್ದಾರಿ ನಿರ್ಮಾಣ, ಕಲ್ಲು-ಮರಳಿನ ಗಣಿಗಾರಿಕೆ, ನದಿತಿರುವು ಕಾಮಗಾರಿ, ಪ್ರವಾಸೋದ್ಯಮದ ವಿಸ್ತರಣೆ ಮತ್ತು ಭೋಗಸೌಲಭ್ಯಗಳ ನಿರ್ಮಾಣ ಎಲ್ಲವೂ ಹೆಚ್ಚುತ್ತಿವೆ. ಅತಿವೃಷ್ಟಿ, ಭೂಕುಸಿತ, ಮಣ್ಣಿನ ಶೀಘ್ರ ಸವಕಳಿ, ತೇವನಾಶವೇ ಮುಂತಾದ ಹವಾಗುಣ ಸಂಬಂಧಿ ಒತ್ತಡಗಳ ಜೊತೆಜೊತೆಗೇ ಬಲಾಢ್ಯರ ಪೆಟ್ಟನ್ನೂ ಸಹಿಸಿಕೊಳ್ಳಬೇಕಾದ ಇಜ್ಜೋಡಿ ಸವಾಲನ್ನು ಪಶ್ಚಿಮಘಟ್ಟಗಳು ಎದುರಿಸುತ್ತಿವೆ. 'ಇದು ನಾಳಿನ ಪೀಳಿಗೆಯ ಆಸ್ತಿ, ನಾವಿದನ್ನು ರಕ್ಷಿಸಿಡಬೇಕು' ಎಂಬ ಮನೋಭೂಮಿಕೆಯ ಬದಲು, 'ಇದು ನಮ್ಮದು, ಇದನ್ನು ಭೋಗಿಸುವ ಹಕ್ಕು ನಮಗಿರಬೇಕು' ಎಂಬ ಮನುಷ್ಯಕೇಂದ್ರಿತ ಧೋರಣೆಯೇ ಇದುವರೆಗೆ ಮೇಲುಗೈ ಪಡೆದಿದೆ.

                 ಹೀಗಾಗಿಯೇ ಹಿಂದಿನ ಎರಡೂ ಸಮಿತಿಗಳ ವರದಿಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗದ ಇಂಗ್ಲಿಷ್‌ನಲ್ಲೇ ಇಟ್ಟು, ಸ್ಥಳೀಯರಲ್ಲಿ ಅನಗತ್ಯ ಭಯ ಹುಟ್ಟಿಸಿ ವರದಿಗಳನ್ನೇ ಕೈಬಿಡುವಂತೆ ಮಾಡುವಲ್ಲಿ ಹೂಡಿಕೆದಾರರ ಒತ್ತಡವಿತ್ತೆಂದು ಪರಿಸರವಾದಿಗಳು ಹೇಳುತ್ತ ಬಂದಿದ್ದರು. ಆಗಿದ್ದಾಯಿತು. ಈಗ ಈ ಮೂರನೆಯ ಸಮಿತಿಯ ಶಿಫಾರಸುಗಳೂ ಹಾಗೇ ಹಳ್ಳ ಹಿಡಿಯದಂತಾಗಬೇಕು. ಅವು ಇಡೀ ಪಶ್ಚಿಮಘಟ್ಟಗಳ ಸ್ಥಳೀಯರ ಭವಿಷ್ಯದ ಹಾಗೂ ನಿಸರ್ಗದ ಹಿತ ಕಾಯುವಂತಿರಬೇಕು. ಕ್ಷಿಪ್ರ ಸಮಯಮಿತಿಯಲ್ಲಿ ವರದಿ ಅಂತಿಮ ರೂಪ ಪಡೆಯುತ್ತಲೇ ಅದು ಸ್ಥಳೀಯ ಭಾಷೆಗಳಿಗೆ ತರ್ಜುಮೆಯಾಗಿ ಗ್ರಾಮಮಟ್ಟದಲ್ಲಿ ಚರ್ಚೆಗೆ ಸಿಗುವಂತಾಗಬೇಕು. ವರದಿ ಜಾರಿಗೆ ಬರಬೇಕೆಂದು ಸ್ಥಳೀಯರೇ ಒತ್ತಾಯಿಸುವಷ್ಟರಮಟ್ಟಿಗೆ ಅದು ನಾಳಿನ ಪೀಳಿಗೆಯ ಮುಖವಾಣಿಯಾಗಬೇಕು.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries