ಕುಂಬಳೆ: ಯಕ್ಷಗಾನ ಕಲಾವಲಯದಲ್ಲಿ ತಿಟ್ಟುಬೇಧವಿಲ್ಲದೇ ಜನಪ್ರಿಯಗೊಂಡ 'ಕಣಿಪುರ' ಯಕ್ಷಗಾನ ಮಾಸಪತ್ರಿಕೆ ಪ್ರಕಟಣೆಯ ಹತ್ತು ವರ್ಷಗಳನ್ನು ದಾಟಿ ಹನ್ನೊಂದನೇ ವರ್ಷಕ್ಕೆ ಕಾಲೂರುವ ಸಂಭ್ರಮದ ಹಿನ್ನೆಲೆಯಲ್ಲಿ ಕುಂಬ್ಳೆಯ ಪಾರ್ತಿಸುಬ್ಬನ ನೆಲದಲ್ಲಿ "ಕಣಿಪುರ ಯಕ್ಷೋತ್ಸವ" ನಡೆಯಲಿದೆ. ಡಿ. 18 ಆದಿತ್ಯವಾರ ಸಂಜೆ 6ರಿಂದ ರಾತ್ರಿ 12ರ ತನಕ ನಡೆಯುವ ಸಮಾರಂಭದಲ್ಲಿ ತೆಂಕುತಿಟ್ಟಿನ ಚಿಗುರು ಬಾಲಪ್ರತಿಭೆಗಳಿಗೆ 'ಕಣಿಪುರ ಯಕ್ಷೋತ್ಸವ ಪ್ರತಿಭಾ ಪುರಸ್ಕಾರ' ನೀಡುವುದರೊಂದಿಗೆ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆಯಾಗಲಿದೆ. ಬಳಿಕ ಹನುಮಗಿರಿ ಮೇಳದ ಪ್ರಸಿದ್ಧ ಕಲಾವಿದರಿಂದ "ಶ್ರೀ ರಾಮ ಕಾರುಣ್ಯ" ಆಖ್ಯಾನದ ಬಯಲಾಟ ಜರಗಲಿದೆ.
ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಂಸ್ಕøತಿಕ ವಲಯದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಪ್ರಸ್ತುತ ಕಾರ್ಯಕ್ರಮದ ಯಶಸ್ಸಿಗೆ ಸಿದ್ಧತೆಗಳು ಆರಂಭಗೊಂಡಿದ್ದು 'ಕಣಿಪುರ ಯಕ್ಷೋತ್ಸವ ಸಮಿತಿ' ಅಸ್ತಿತ್ವಕ್ಕೆ ಬಂದಿದೆ. ಕುಂಬಳೆ ಜಯಮಾರುತಿ ವ್ಯಾಯಾಮ ಶಾಲೆಯಲ್ಲಿ ನಡೆದ ಸಿದ್ಧತಾ ಸಭೆಯಲ್ಲಿ 'ಕಣಿಪುರ' ಮಾಸಪತ್ರಿಕೆಯ ಸ್ಥಾಪಕ ಸಂಪಾದಕ, ಹಿರಿಯ ಪತ್ರಕರ್ತ ಎಂ.ನಾ. ಚಂಬಲ್ತಿಮಾರ್ ಮಾತನಾಡಿ "ಕುಂಬಳೆಯ ಇತಿಹಾಸವೆಂದರೆ ಅದು ಯಕ್ಷಗಾನ ಅವಲಂಬಿತವಾಗಿದೆ. ತೆಂಕಣ ಯಕ್ಷಗಾನದ ಮೂಲನೆಲದಲ್ಲಿ ಅದನ್ನು ಹೊಸ ಪೀಳಿಗೆಗೆ ಕೈದಾಟಿಸಿ ಈ ನೆಲದ ಕಲಾಪರಂಪರೆಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆಯಲ್ಲಿ ಆಯೋಜಿಸುವ ಯಕ್ಷೋತ್ಸವಕ್ಕೆ ಸರ್ವರ ಪ್ರೋತ್ಸಾಹ ಬೇಕೆಂದು ತಿಳಿಸಿದರು,
ಕಣಿಪುರ ಯಕ್ಷೋತ್ಸವದ ಯಶಸ್ಸಿಗಾಗಿ ಉದ್ಯಮಿ ನಾಗೇಶ್ ಕಾರ್ಲೆ(ಅಧ್ಯಕ್ಷರು), ಪ್ರಶಾಂತ ಭಟ್(ಉಪಾಧ್ಯಕ್ಷರು), ಅಶೋಕ್ ಕೆ. (ಕಾರ್ಯದರ್ಶಿ), ಸುರೇಶ್ ಶಾಂತಿಪಳ್ಳ(ಜತೆ ಕಾರ್ಯದರ್ಶಿ), ನ್ಯಾಯವಾದಿ ರಾಮಪಾಟಾಳಿ(ಖಜಾಂಜಿ), ಎಂ.ನಾ. ಚಂಬಲ್ತಿಮಾರ್ (ಸಂಚಾಲಕ), ಪ್ರಕಾಶ್ ಆರಿಕ್ಕಾಡಿ (ಸಹಸಂಚಾಲಕ) ಮತ್ತು 25ಮಂದಿ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಯಿತು. ಸಾಮಾಜಿಕ ಮುಂದಾಳು ಸುಜಿತ್ ರೈ ಉಪಸ್ಥಿತರಿದ್ದು ಸಲಹೆ ಇತ್ತರು. ನಾಗೇಶ್ ಕಾರ್ಳೆ ಸ್ವಾಗತಿಸಿ, ಸುಜನಾ ಶಾಂತಿಪಳ್ಳ ವಂದಿಸಿದರು.
ಡಿ. 18ರಂದು ಕಣಿಪುರ ಯಕ್ಷೋತ್ಸವ: ಸಿದ್ಧತೆ ಆರಂಭ, ಸಮಿತಿ ರಚನೆ
0
ನವೆಂಬರ್ 20, 2022

