ನವದೆಹಲಿ: ಕಾಲ ಬದಲಾಗಿದೆ. ಹಿಂದೆಲ್ಲಾ ಕಡಿಮೆ ಖರ್ಚಿನಲ್ಲಿ, ಸೀಮಿತ ರೀತಿಯಲ್ಲಿ ವಿವಾಹ ಸಮಾರಂಭಗಳು
ನಡೆದು
ಹೋಗಿತ್ತಿದ್ದವು. ಪ್ರಸ್ತುತ ಕಾಲಘಟ್ಟದಲ್ಲಿ ವಿವಾಹ ಕಾರ್ಯಕ್ರಮಕ್ಕೆಂದು ಕೋಟ್ಯಂತರ
ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಹೀಗಾಗಿ ಒಂದು ವಿವಾಹ ಸಮಾರಂಭ ನಡೆದರೆ ಅಲ್ಲಿ ದೊಡ್ಡ
ಮಟ್ಟದ ಹಣದ ವ್ಯವಹಾರ ನಡೆಯುತ್ತದೆ.
ಈ ಬೆಳವಣಿಗೆ ಹೆತ್ತವರಿಗೆ ಹೊರೆ ಎನಿಸಿದರೂ, ಹಲವು ಉದ್ಯಮ ಕ್ಷೇತ್ರಗಳಿಗೆ ವರವಾಗಿ ಪರಿಣಮಿಸಿದೆ. ಇದೀಗ ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ (CAIT) ಸಮೀಕ್ಷೆಯೊಂದನ್ನು ನಡೆಸಿ ಹೊಸ ವರದಿಯನ್ನು ನೀಡಿದೆ.
ಸಿಎಐಟಿ ಇದೀಗ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ನವೆಂಬರ್ 4 ರಿಂದ ಡಿಸೆಂಬರ್ 14ರ ಅವಧಿಯಲ್ಲಿ ದೇಶದಾದ್ಯಂತ ಸುಮಾರು 32 ಲಕ್ಷ ವಿವಾಹ ಸಮಾರಂಭಗಳು ನಡೆಯಲಿವೆ. ಇದರಿಂದ ವಿವಿಧ ಕ್ಷೇತ್ರಗಳ್ಲಿ 3.75 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆಯುವ ನಿರೀಕ್ಷೆ ಇದೆ ಎಂದು ತಿಳಿಸಿದೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (CAIT) ಸಂಶೋಧನಾ ವಿಭಾಗವು ಸಮೀಕ್ಷೆ ನಡೆಸಿ ಈ ವರದಿ ನೀಡಿದೆ. ಸಮೀಕ್ಷೆಗಾಗಿ 35 ನಗರಗಳಲ್ಲಿ, 4,302 ವ್ಯಾಪಾರಿಗಳನ್ನು ಒಳಪಡಿಸಿದೆ. ಈ ವರ್ಷ ದೆಹಲಿಯಲ್ಲೇ 3.5 ಲಕ್ಷ ವಿವಾಹಗಳು ನಡೆಯುವ ನಿರೀಕ್ಷೆಯಿದ್ದು, 75,000 ಕೋಟಿ ರೂ. ವಹಿವಾಹು ನಿರೀಕ್ಷಿಸಲಾಗಿದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.


