ತಿರುವನಂತಪುರಂ: ಸೋಲಾರ್ ವಂಚನೆ ಪ್ರಕರಣದ ಆರೋಪಿತೆ ಸರಿತಾ ನಾಯರ್, ತನ್ನನ್ನು ಕೊಲ್ಲಲು ಹಲವು ಬಾರಿ ಪ್ರಯತ್ನಗಳು ನಡೆದಿವೆ ಎಂದು ಹೇಳಿದ್ದಾರೆ.
ಸರಿತಾ ಎಸ್. ನಾಯರ್ ಅವರು ತಮ್ಮ ಮಾಜಿ ಚಾಲಕ ವಿನುಕುಮಾರ್ ವಿರುದ್ಧ ದೂರು ದಾಖಲಿಸಿರುವರು. ತನ್ನ ಆಹಾರಕ್ಕೆ ರಾಸಾಯನಿಕ ಬೆರೆಸಿ ಹಲವು ಬಾರಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಸರಿತಾ ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಅಪರಾಧ ವಿಭಾಗದ ಪೊಲೀಸರು ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದರು.
ರಾಜ್ಯದಲ್ಲಿ ಯಾವುದೇ ಪರೀಕ್ಷಾ ಸೌಲಭ್ಯವಿಲ್ಲದ ಕಾರಣ ಮಾದರಿಗಳನ್ನು ಪರೀಕ್ಷೆಗಾಗಿ ನವದೆಹಲಿಯ ರಾಷ್ಟ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ದೈಹಿಕ ನ್ಯೂನತೆ ಹೊಂದಿರುವ ಸರಿತಾ ಸದ್ಯ ಶ್ರೀಚಿತ್ರಾ ಆರೋಗ್ಯ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಿತಾ ಅವರು ತೀವ್ರ ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಎಡಗಣ್ಣಿನ ದೃಷ್ಟಿ ಕಳೆದುಕೊಂಡಿರುವರು. ಎಡಗಾಲೂ ಶಕ್ತಿ ಕುಂದುವ ಹಂತದಲ್ಲಿದೆ. ವಂಚನೆ ಮೂಲಕ ಕೊಂದು ಆರ್ಥಿಕ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಚಾಲಕ ವಿನುಕುಮಾರ್ ಸಂಚು ರೂಪಿಸಿದ್ದ ಎಂದು ಚಾಲಕ ವಿರುದ್ದ ನೀಡಿರುವ ದೂರಿನಲ್ಲಿ ಎಫ್‍ಐಆರ್‍ನಲ್ಲಿ ಹೇಳಲಾಗಿದೆ.
ದೂರುದಾರರಿಗೆ ಸಾಯುವ ರೀತಿಯಲ್ಲಿ ರಾಸಾಯನಿಕಗಳನ್ನು ನೀಡಲಾಯಿತು. ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 420 (ವಂಚನೆ), 120 ಬಿ (ಪಿತೂರಿ) ಮತ್ತು 34 (ಸಂಘಟಿತ ಪಿತೂರಿ) ವಿಧಿಸಲಾಗಿದೆ. ದೂರು ಸ್ವೀಕರಿಸಿದ ಬಳಿಕ ಅಪರಾಧ ವಿಭಾಗದ ಪೆÇಲೀಸರು ಪ್ರಾಥಮಿಕ ತನಿಖೆ ನಡೆಸಿದ್ದರು. ವಿನುಕುಮಾರ್ ಅವರ ಮನೆಯಲ್ಲೂ ತಪಾಸಣೆ ನಡೆಸಲಾಯಿತು. ಚಿಕಿತ್ಸೆ ನೀಡುತ್ತಿರುವ ವೈದ್ಯರಿಂದಲೂ ಮಾಹಿತಿ ಸಂಗ್ರಹಿಸಲಾಗಿದೆ. ವಿನುಕುಮಾರ್ ಅವರ ದೂರವಾಣಿ ದಾಖಲೆಗಳನ್ನು ತನಿಖಾ ತಂಡ ಸಂಗ್ರಹಿಸಿದೆ. ವಿನುಕುಮಾರ್ ಅಲ್ಲದೆ ಇನ್ನು ಕೆಲವರು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುತ್ತಾರೆ ಸರಿತಾ. ಜನವರಿ 3, 2022 ರಂದು ಪ್ರಯಾಣದ ವೇಳೆ ವಿನುಕುಮಾರ್ ಕರಮಾನದ ಜ್ಯೂಸ್ ಅಂಗಡಿಯಲ್ಲಿ ರಾಸಾಯನಿಕವನ್ನು ಬೆರೆಸಿದ್ದರು ಎಂದು ತಿಳಿದುಬಂದಿದೆ ಎಂದು ಸರಿತಾ ಹೇಳಿದರು.
ರಾಸಾಯನಿಕಯುಕ್ತ ಆಹಾರ ನೀಡಿ ಹಲವು ಬಾರಿ ಕೊಲೆ ಯತ್ನ: ಮಾಜಿ ಚಾಲಕನ ವಿರುದ್ಧ ಸರಿತಾ ಎಸ್ ದೂರು
0
ಫೆಬ್ರವರಿ 28, 2023


