ಪಯ್ಯನ್ನೂರು; ಪಯ್ಯನ್ನೂರು ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಸರ್ಕಾರಿ ವಾಹನ ಹೊರ ಬರಲಾಗದೆ ಸುತ್ತ ಗೋಡೆ ನಿರ್ಮಿಸಿ ಒಳಗೆ ಬೀಗ ಹಾಕಿದ ನೈಜ ಘಟನೆಯೊಂದು ಕುತೂಹಲ ಮೂಡಿಸಿದೆ.
ಸರ್ಕಾರಿ ನಿಯಂತ್ರಿತ ಕೇರಳ ಹೆಲ್ತ್ ರಿಸರ್ಚ್ ವೆಲ್ಫೇರ್ ಸೊಸೈಟಿಯ ಕಣ್ಣೂರು ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿ ಎದುರು ನಿಲ್ಲಿಸಿದ್ದ ವಾಹನವನ್ನು ಹೊರ ತೆಗೆಯಲು ಸಾಧ್ಯವಾಗದಂತೆ ಗೋಡೆ ಕಟ್ಟಲಾಗಿತ್ತು. ಆಸ್ಪತ್ರೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ನಡೆದ ಕಾಮಗಾರಿಯ ವೇಳೆ ನಿಲ್ಲಿಸಲಾಗಿದ್ದ ವಾಹನವನ್ನು ಸುತ್ತು ಬಳಸಿ ಬೃಹತ್ ಗೋಡೆ ನಿರ್ಮಿಸಲಾಗಿತ್ತು.
ಕೋವಿಡ್ ಅವಧಿಯಲ್ಲಿ ಆರೋಗ್ಯ ಇಲಾಖೆಯ ವಾಹನವನ್ನು ಸೇವೆಗೆ ತರಲಾಗಿತ್ತು. ಈ ವಾಹನವು 2018 ರಲ್ಲಿ ಫಿಟ್ ನೆಸ್ ಕೊನೆಗೊಂಡ ವಾಹನ ಇದಾಗಿದೆ. ಆದ್ದರಿಂದ ಕೋವಿಡ್ ನಂತರ ವಾಹನವನ್ನು ಹೊರತೆಗೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ವಾಹನ ಇಲ್ಲಿಯೇ ಬಿದ್ದಿತ್ತು. ಗೋಡೆ ಕಟ್ಟಿದಾಗ ವಾಹನ ಹೊರ ತೆಗೆಯಲು ದಾರಿ ಮಾಡಿರಲಿಲ್ಲ. ವಾಹನ ಹೊರತೆಗೆಯುವುದು ಹೇಗೆ ಎಂದು ನಿವಾಸಿಗಳು ಪ್ರಶ್ನೆ ಎತ್ತಿದಾಗಲಷ್ಟೇ ತಪ್ಪು ಅರಿವಿಗೆ ಬಂದಿದೆ. ಗೋಡೆಗೆ ಸಿಮೆಂಟ್ ಬಳಿಯಲಾಗಿದ್ದು, ಕೆಡವಲು ಸಾಧ್ಯವಿಲ್ಲ. ಇನ್ನು ಈ ವಾಹನ ಹೊರತರುವಂತಿಲ್ಲ ಎನ್ನುತ್ತಾರೆ ಸಂಬಂಧಪಟ್ಟವರು. ಹಾಗೊಂದು ವೇಳೆ ಹೊರ ತರಬೇಕಿಂದಿದ್ದರೆ ಗೋಡೆ ಕೆಡವಬೇಕು. ಹೇಗೂ ಬಳಕೆಗೆ ಯೋಗ್ಯವಲ್ಲದ ವಾಹನ, ಅದಕ್ಕಾಗಿಯೇ ಗೋಡೆಯನ್ನು ನಿರ್ಮಿಸಲಾಗಿದೆ. ಇಷ್ಟೂ ಬುದ್ದಿವಂತಿಕೆಯ ಅಭಿಯಂತರರು, ಮೇಲಧಿಕಾರಿಗಳು ಇರುವಲ್ಲಿ ವರೆಗೆ ಅಭಿವೃದ್ದಿಯೆಂಬುದು ಗೋಡೆಯೊಳಗಿನ ಅಲ್ಲ ಕನ್ನಡಿಯೊಳಗಿನ ಗಂಟು ಎಂದು ಬೇರೆ ಹೇಳಬೇಕಿಲ್ಲವಷ್ಟೇ?!
ಹಾಸ್ಯ ದೃಶ್ಯವಲ್ಲ; ತಾಲೂಕು ಆಸ್ಪತ್ರೆಯಲ್ಲಿ ಸರ್ಕಾರಿ ವಾಹನ ಬಂಧಿಸಿ ಗೋಡೆ ಕಟ್ಟಿದ ಮಹನೀಯರು!
0
ಮಾರ್ಚ್ 19, 2023





