ನವದೆಹಲಿ: ಐತಿಹಾಸಿಕ ಅಮೃತ್ ಉದ್ಯಾನವನ್ನು ಸಾರ್ವಜನಿಕರಿಗಾಗಿ ಮುಂದಿನ ಒಂದು ತಿಂಗಳವರೆಗೆ ತೆರಯಲಾಗುತ್ತದೆ ಎಂದು ರಾಷ್ಟ್ರಪತಿ ಭವನ ಬುಧವಾರ ಹೇಳಿಕೆ ಬಿಡುಗಡೆ ಮಾಡಿದೆ.
'ಸಾರ್ವಜನಿಕರ ಭೇಟಿಗಾಗಿ ಅಮೃತ ಉದ್ಯಾನವನ್ನು ಮತ್ತೊಮ್ಮೆ ಒಂದು ತಿಂಗಳವರೆಗೆ ತೆರೆಯಲಾಗುತ್ತದೆ.
ರಾಷ್ಟ್ರಪತಿ ಭವನದ ಉದ್ಯಾನವು ವರ್ಷವೊಂದರಲ್ಲಿ ಎರಡನೇ ಬಾರಿಗೆ ಸಾರ್ವಜನಿಕರ ಭೇಟಿಗೆ ಮುಕ್ತವಾಗುತ್ತಿರುವುದು ಇದೇ ಮೊದಲು.
ಈ ವರ್ಷ ಜನವರಿ 29ರಿಂದ ಮಾರ್ಚ್ 31ರವರೆಗೆ ನಡೆದ ಉದ್ಯಾನ ಉತ್ಸವ-1ರ ಅವಧಿಯಲ್ಲಿ ಸುಮಾರು 10 ಲಕ್ಷ ಜನರು ಉದ್ಯಾನಕ್ಕೆ ಭೇಟಿ ನೀಡಿದ್ದರು.
ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಆನ್‌ಲೈನ್ ಮೂಲಕ ರಾಷ್ಟ್ಟಪತಿ ಭವನದ ವೆಬ್‌ಸೈಟ್‌ನಲ್ಲಿ (https://visit.rashtrapatibhavan.gov.in/) ನೋಂದಣಿ ಮಾಡಿಕೊಳ್ಳಬಹುದು. ಉದ್ಯಾನದ ಗೇಟ್ ಸಂಖ್ಯೆ 35ರಲ್ಲಿ ನೇರವಾಗಿ ಪಾಸ್ ಪಡೆಯುವುದಕ್ಕೂ ಅವಕಾಶವಿದೆ.
ರಾಷ್ಟ್ರಪತಿಗಳ ಅಧಿಕೃತ ನಿವಾಸದಲ್ಲಿರುವ ಅಮೃತ್ ಉದ್ಯಾನವನ್ನು ಈ ಹಿಂದೆ ಮೊಘಲ್ ಉದ್ಯಾನ ಎನ್ನಲಾಗುತ್ತಿತ್ತು. 'ದೇಶದ ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ' ಆಚರಣೆಯ ಭಾಗವಾಗಿ ಉದ್ಯಾನದ ಹೆಸರನ್ನು 'ಅಮೃತ್ ಉದ್ಯಾನ' ಎಂದು ಮರುನಾಮಕರಣ ಮಾಡಲಾಗಿದೆ.


