HEALTH TIPS

ಸಾಧನೆಗಳ 'ಶಿಖರ' ಈ ಪಂಜಾಬ್‌ ಬಾಲಕಿ: ಎವರೆಸ್ಟ್ ಏರಿದ ಸಾನ್ವಿ

                 ಚಂಡೀಗಢ: ಚಿಕ್ಕ ವಯಸ್ಸಿನ ಮಕ್ಕಳು ಸಾಮಾನ್ಯವಾಗಿ ತಮ್ಮ ಸಮಯವನ್ನು ಸೋಮಾರಿತನದಿಂದಲೇ ಕಳೆಯುತ್ತಾರೆ. ಆದರೆ, ಎಂಟು ವರ್ಷದ ಪಂಜಾಬ್‌ನ ಬಾಲಕಿಯೊಬ್ಬಳು ಪರ್ವತಾರೋಹಣ ಮಾಡುವ ಮೂಲಕ ಸಾಧನೆಗಳ ಶಿಖರವನ್ನೇ ಏರಿದ್ದಾಳೆ.‌

               ಇಂಥ ಸಾಧನೆಗಳ ಉತ್ತುಂಗಕ್ಕೇರಿದ ಬಾಲಕಿ ಹೆಸರು ಸಾನ್ವಿ ಸೂದ್‌. ಪಂಜಾಬ್‌ನ ರೂಪನಗರ ಜಿಲ್ಲೆಯ ನಿವಾಸಿ.

              'ಸಾನ್ವಿ ಕಳೆದ ವರ್ಷ ಮೌಂಟ್‌ ಎವರೆಸ್ಟ್‌ನ ಬೇಸ್‌ ಕ್ಯಾಂಪ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಬಂದಿದ್ದಾಳೆ. ಆಗ ಆಕೆಯ ವಯಸ್ಸು ಏಳು ವರ್ಷ. ಇಂಥದ್ದೊಂದು ಸಾಧನೆ ಮಾಡಿದ ದೇಶದ ಅತ್ಯಂತ ಕಿರಿಯ ವಯಸ್ಸಿನ ಚಾರಣಗಾರ್ತಿ ಸಾನ್ವಿ' ಎಂದು ಆಕೆಯ ತಂದೆ ದೀಪಕ್‌ ಸೂದ್‌ ಹೆಮ್ಮೆಯಿಂದ ಹೇಳುತ್ತಾರೆ.

                  'ಅಲ್ಲದೇ, 2022ರ ಜುಲೈನಲ್ಲಿ ಆಫ್ರಿಕಾದ ಅತಿ ಎತ್ತರದ ಪರ್ವತ ಕಿಲಿಮಂಜಾರೊವನ್ನೂ ಈಕೆ ಏರಿದ್ದಳು. ಆಗ, ಕಿಲಿಮಂಜಾರೊ ಪರ್ವತ ಏರಿದ ಏಷ್ಯಾದ ಅತ್ಯಂತ ಕಿರಿಯ ಬಾಲಕಿ ಎಂಬ ಗೌರವಕ್ಕೆ ಸಾನ್ವಿ ಭಾಜನಳಾಗಿದ್ದಳು. ಈ ವರ್ಷದ ಮೇ ತಿಂಗಳಲ್ಲಿ ಆಸ್ಟ್ರೇಲಿಯಾದ ಕೊಸ್ಸಿಯುಸ್ಕೊ ಪರ್ವತ, ಜುಲೈ ತಿಂಗಳಿನಲ್ಲಿ ರಷ್ಯಾದ ಎಲ್ಬರ್ಸ್‌ ಪರ್ವತವನ್ನು ಆರೋಹಣ ಮಾಡಿ, ಇಂಥ ಸಾಧನೆ ಮಾಡಿದ ಜಗತ್ತಿನ ಕಿರಿಯ ಬಾಲಕಿ ಎಂಬ ಮನ್ನಣೆಗೆ ಸಾನ್ವಿ ಪಾತ್ರಳಾಗಿದ್ದಾಳೆ. ಮುಂದೆಯೂ ಪರ್ವಾತಾರೋಹಣ ಮುಂದುವರಿಸುತ್ತಾಳೆ' ಎಂದರು.

                ಪೋಷಕರೇ ಪ್ರೇರಣೆ: 'ನನ್ನ ಸಾಧನೆಗೆ ನನ್ನ ಪೋಷಕರೇ ಪ್ರೇರಣೆ. ಪರ್ವತಾರೋಹಣ ಮಾಡುವಂತೆ ಅವರು ಯಾವಾಗಲೂ ನನ್ನನ್ನು ಹುರುದುಂಬಿಸುತ್ತಿರುತ್ತಾರೆ. ನನ್ನ ತಂದೆಯ ಕೆಲಸ ಸಾಮಾನ್ಯವಾಗಿ ಪರ್ವತ ಪ್ರದೇಶದಲ್ಲೇ ನಡೆಯುತ್ತದೆ. ಅಲ್ಲೆಲ್ಲ ಸಂಚರಿಸುವಾಗ ನಾನು ಚಾರಣದ ಕೌಶಲ ಬೆಳೆಸಿಕೊಂಡೆ' ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ಸಾನ್ವಿ.

             ಸಾನ್ವಿ ತಂದೆ ದೀಪಕ್‌ ಒಬ್ಬ ಗುತ್ತಿಗೆದಾರ. ಪರ್ವತ ಪ್ರದೇಶಗಳಲ್ಲಿ ನಡೆಯುವ ವಿವಿಧ ಯೋಜನೆಗಳಿಗಾಗಿ ಮಣ್ಣಿನ ಪರೀಕ್ಷೆ ನಡೆಸುವುದು ಇವರ ಕೆಲಸವಾಗಿದೆ.

ಓದಿನಲ್ಲೂ ಮುಂದು: ಪರ್ವತಾರೋಹಣದಲ್ಲಿ ಸದಾ ನಿರತವಾಗಿರುವ ಈ ಪುಟ್ಟ ಬಾಲಕಿ ಓದಿನಲ್ಲಿಯೂ ಮುಂದಿದ್ದಾಳೆ.

                  'ಸಾನ್ವಿ ಚೆನ್ನಾಗಿ ಓದುತ್ತಾಳೆಂದು ಅವಳ ಶಿಕ್ಷಕರೂ ಹೊಗಳುತ್ತಾರೆ. ಅವಳು ಪರಿಣಾಮಕಾರಿಯಾಗಿ ಸಮಯವನ್ನು ನಿರ್ವಹಿಸುತ್ತಾಳೆ. ಅಲ್ಲದೇ ಉತ್ತಮವಾದ ಯೋಜಿತ ದಿನಚರಿಯನ್ನೂ ಹೊಂದಿದ್ದಾಳೆ' ಎಂದು ದೀಪಕ್‌ ಅವರು ತಿಳಿಸಿದರು.

               ಮಗಳ ಓದಿಗೆ ಸಹಾಯವಾಗಲೆಂದು ಸಾನ್ವಿಯ ತಾಯಿ ಯಾವಾಗಲೂ ಪಠ್ಯಪುಸ್ತಕಗಳ ಟಿಪ್ಪಣಿಗಳನ್ನು ಸಿದ್ಧಪಡಿಸಿಟ್ಟಿರುತ್ತಾರೆ. ಪ್ರಸ್ತುತ, ಮೊಹಾಲಿಯ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಸಾನ್ವಿ ಓದುತ್ತಿದ್ದಾಳೆ.

                     'ದೈಹಿಕವಾಗಿ ಮತ್ತು ಮಾನಸಿಕವಾಗಿ ಸಮರ್ಥರಾಗಿದ್ದರೆ, ಬಾಲಕಿಯರು ಏನು ಬೇಕಾದರೂ ಸಾಧಿಸಬಹುದೆಂದು ಹೇಳಲು ನಾನು ಇಚ್ಛಿಸುತ್ತೇನೆ' ಎನ್ನುತ್ತಾಳೆ ಚಿಕ್ಕ ವಯಸ್ಸಿನ ಈ 'ಶಿಖರ' ಸಾಧಕಿ.

                 'ನಾವು ಪ್ರತಿ ವರ್ಷ ಕೇದಾರನಾಥ ಮತ್ತು ಮಾತಾ ವೈಷ್ಣೋ ದೇವಿ ದೇಗುಲಗಳಿಗೆ ಭೇಟಿ ನೀಡುತ್ತೇವೆ. ಇಂಥ ಸಮಯದಲ್ಲಿಯೇ ಮಗಳ ಸಾಮರ್ಥ್ಯದ ಬಗ್ಗೆ ಅರಿವಾದದ್ದು. ಅಲ್ಲದೇ, ನನ್ನ ಬಹುತೇಕ ಕೆಲಸವು ಪರ್ವತ ಪ್ರದೇಶಗಳಲ್ಲಿಯೇ ನಡೆಯುತ್ತದೆ. ಕೆಲಸದ ಸ್ಥಳಗಳಿಗೆ ಸಾನ್ವಿ ನನ್ನ ಜೊತೆ ಯಾವಾಗಲೂ ಬರುತ್ತಿದ್ದಳು. ಒಂದು ಬಾರಿಯಂತೂ ರೋಹ್ಟಾಂಗ್‌ನಲ್ಲಿ ನನ್ನ ಜೊತೆ ಸುಮಾರು 18 ಕಿ.ಮೀ. ಚಾರಣ ಮಾಡಿದ್ದಳು. ಈ ಘಟನೆ ಬಳಿಕ, ಪರ್ವತಾರೋಹಣ ಕ್ಷೇತ್ರದಲ್ಲಿ ನನ್ನ ಮಗಳು ಸಾಧನೆ ಮಾಡಬಹುದು ಎಂದು ನನಗೆ ಎನ್ನಿಸಿತು' ಎಂದರು. 'ಚಾರಣ ಮತ್ತು ಪರ್ವತಾರೋಹಣದ ತಯಾರಿಗಾಗಿ ಸೈಕ್ಲಿಂಗ್‌, ಯೋಗ ಹಾಗೂ ಇತರ ವ್ಯಾಯಾಮಗಳನ್ನು ಸಾನ್ವಿ ಮಾಡುತ್ತಾಳೆ' ಎಂದು ಅವರು ತಿಳಿಸಿದರು.ರೊಹ್ಟಾಂಗ್‌ನಲ್ಲಿ 18 ಕಿ.ಮೀ. ಚಾರಣ ಪರ್ವತಾರೋಹಣದಲ್ಲಿ ಸಾನ್ವಿ ಮಾಡಿರುವ ಸಾಧನೆ ಗುರುತಿಸಿ, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಸ್ವಾತಂತ್ರ್ಯ ದಿನಾಚರಣೆಯಂದು ಈಕೆಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries