ಬದಿಯಡ್ಕ : ,'ಪಠ್ಯವು ಮಕ್ಕಳ ಬದುಕಿಗೆ ಭದ್ರತೆಯಾದರೆ, ಪಠ್ಯೇತರ ಚುಟುವಟಿಕೆಯು ಮಕ್ಕಳ ವ್ಯಕ್ತಿತ್ವಕ್ಕೆ ಕಿರೀಟವಾಗುತ್ತದೆ. ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸುತ್ತದೆ. ಅವಕಾಶಗಳು ಆಕಸ್ಮಿಕವಾಗಿ ದೊರೆಯುತ್ತದೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕು. ಕಲಾ ಉತ್ಸವಗಳಲ್ಲಿ ದೊರೆಯುವ ಅನುಭವವೂ ಕೂಡಾ ಗೆಲುವಿನಷ್ಟೇ ಮಹತ್ವವಾಗಿದೆ. ಎಲ್ಲಾ ಪ್ರಯತ್ನಗಳೂ ಯಶಸ್ಸು ನೀಡಲೇ ಬೇಕಾಗಿಲ್ಲ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳಬಾರದು.' ಎಂದು ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಹೇಳಿದರು.
ಅವರು ಮಂಗಳವಾರ ಬದಿಯಡ್ಕದ ನವಜೀವನ ವಿದ್ಯಾಲಯದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಬಿಆರ್‍ಸಿ ಕಲಾ ಉತ್ಸವ -2023ನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಂಬಳೆ ಉಪಜಿಲ್ಲಾ ಬಿಆರ್‍ಸಿ ಬ್ಲಾಕ್ ಯೋಜನಾಧಿಕಾರಿ ಜಯರಾಮ ಜೆ ಮಾತನಾಡಿ, 'ಶಾಲಾ ಜೀವನದಲ್ಲಿ ನಡೆಯುವ ಕಲಾ ಉತ್ಸವಗಳಲ್ಲಿ ಮಕ್ಕಳು ಹೆಚ್ಚು ಉತ್ಸಾಹದಿಂದ ಭಾಗವಹಿಸಬೇಕು. ಪ್ರತಿಭಾ ವಿಕಾಸಕ್ಕೆ ಕಲಾ ಉತ್ಸವಗಳು ಹೆದ್ದಾರಿ. ಮಕ್ಕಳು ಔದಾಸಿನ್ಯ ಮರೆತು ನಿರಂತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಇದರಿಂದ ಅವರ ಜ್ಞಾನ ಹೆಚ್ಚುತ್ತದೆ. ಸಾಮಾಜಿಕವಾಗಿ ಬದುಕುವುದಕ್ಕೆ ಮಾನಸಿಕ ಶಕ್ತಿ ಸೃಷ್ಟಿಯಾಗುತ್ತದೆ' ಎಂದು ಹೇಳಿದರು.
ಶುಭಾಶಂಸನೆ ಮಾಡಿದ ನವಜೀವನ ಪಿದ್ಯಾಲಯದ ಮುಖ್ಯ ಶಿಕ್ಷಕ ವೆಂಕಟ್ರಾಜ ಕಬೆಕ್ಕೋಡು ಅವರು ಮಾತನಾಡಿ,' ಪಠ್ಯೇತರ ಚುಟುವಟಿಕೆಗಳು ಕೇವಲ ಶಾಲಾ ಜೀವನದಲ್ಲಿ ಅಂಕ ಪಡೆಯುವುದಕ್ಕೆ ಸೀಮಿತವಾಗಬಾರದು. ಶಾಲಾ ಜೀವನ ಮುಗಿದರೂ ಕೂಡಾ ಕಲಾ ಚಟುವಟಿಕೆಗಳನ್ನು ದೀಕ್ಷೆಯಂತೆ ಮಕ್ಕಳು ತಮ್ಮ ದೈನಂದಿನ ಜೀವನದಲ್ಲಿ ಉಳಿಸಿಕೊಳ್ಳಬೇಕು. ಅವರಲ್ಲಿ ಕಲಾ ಪ್ರಜ್ಞೆ ಶಾಶ್ವತವಾಗಿಬೇಕು' ಎಂದು ಹೇಳಿದರು.
ಸಿಆರ್‍ಸಿ ಸಂಯೋಜಕಿ ಸುಪ್ರಿಯಾ ಕುಮಾರಿ ಸ್ವಾಗತಿಸಿ, ಸಿಆರ್‍ಸಿ ಸಂಯೋಜಕಿ ಸುಶೀಲಾ ಕೆ ಪದ್ಯಾಣ ವಂದಿಸಿದರು. ಸಿಆರ್‍ಸಿ ಸಂಯೋಜಕ ಈಶ್ವರ ಮಾಸ್ತರ್, ಸುರೇಶ್ ಮಾಸ್ತರ್ ಸಹಕರಿಸಿದರು. ಈ ಕಲಾ ಉತ್ಸವದಲ್ಲಿ ಕುಂಬಳೆ ಉಪಜಿಲ್ಲೆಯ ಅನೇಕ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಗಾಯನ, ವಾದನ, ನೃತ್ಯ, ಏಕಪಾತ್ರಾಭಿನಯ ಮೊದಲಾದ ಅನೇಕ ಸ್ಫರ್ಧೆಗಳಲ್ಲಿ ಭಾಗವಹಿಸಿದರು.

.jpg)
