ಕಾಸರಗೋಡು: ಕೋಯಿಕ್ಕೋಡಿನಲ್ಲಿ ನಿಫಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ನಿಫಾ ಬಾಧಿತ ಪ್ರದೇಶಗಳಲ್ಲಿ ಶನಿವಾರ ವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ ನಿಷೇಧಿಸಲಾಗಿದೆ. ಜನ ಗುಂಪುಸೇರುವುದನ್ನು ಕಟ್ಟುನಿಟ್ಟಾಗಿ ತಡೆಯಲಾಗುತ್ತಿದೆ. ಸರ್ಕಾರಿ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ವ್ಯವಸ್ಥೆಗೆ ಹೊಂದಿಕೊಳ್ಳುವಂತೆಯೂ ಸೂಚಿಸಲಾಗಿದೆ. ಬೀಚ್‍ಗಳಿಗೆ ಜನರು ತೆರಳುವುದನ್ನು ನಿಷೇಧಿಸಲಾಗಿದೆ. ಶೇಂದಿ ಇಳಿಸುವುದು ಮತ್ತು ಮಾರಾಟವನ್ನೂ ಸ್ಥಗಿತಗೊಳಿಸಲಾಗಿದೆ. ಕೋಯಿಕ್ಕೋಡ್ ಜಿಲ್ಲೆಯಲ್ಲಿ ಅಕ್ಷರಶ: ಕೋವಿಡ್ ಸನ್ನಿವೇಶವನ್ನು ಸೃಷ್ಟಿಸಿದೆ. ಬಹುತೇಕ ಮಂದಿ ಮಾಸ್ಕ್ ಧರಿಸಲಾರಂಭಿಸಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳ ಜತೆ ಒಬ್ಬನಿಗೆ ಮಾತ್ರ ನಿಲ್ಲಲು ಅವಕಾಶ ಕಲ್ಪಿಸಲಾಗಿದೆ. ಕೇರಳದಲ್ಲಿ ಈ ಹಿಂದೆ ಕಾಣಿಸಿಕೊಂಡ ವೈರಾಣುಗಳಷ್ಟು ವೇಗವಾಗಿ ಹರಡುತ್ತಿಲ್ಲ ಎಂಬುದಾಗಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರೆ.
ಜಿಲ್ಲೆಯಲ್ಲಿ ನಿಫಾ ವಿರುದ್ಧದ ಕಾರ್ಯಾಚರಣೆ ಚುರುಕುಗೊಳಿಸಲಾಗಿದ್ದು, ಹೆಚ್ಚಿನ ಜನರ ತಪಾಸಣೆಗೆ ಸಾಧ್ಯವಾಗುವ ರೀತಿಯಲ್ಲಿ ವಿಶೇಷ ಸಂಚಾರಿ ಲ್ಯಾಬ್ ಸಜ್ಜುಗೊಳಿಸಲಾಗಿದೆ. ಏಕ ಕಾಲಕ್ಕೆ 96ಮಾದರಿಗಳನ್ನು ತಪಾಸಣೆ ನಡೆಸುವ ವ್ಯವಸ್ಥೆ ಲ್ಯಾಬ್‍ನಲ್ಲಿದೆ. ಕೇರಳದಲ್ಲಿ ತಿರುವನಂತಪುರ, ಕೋಯಿಕ್ಕೋಡ್, ಆಲಪ್ಪುಯ ಮುಂತಾದೆಡೆ ವೈರಾಲಜಿ ಲ್ಯಾಬ್‍ಗಳ ಮೂಲಕ ನಿಫಾ ತಪಾಸಣಾ ವ್ಯವಸ್ಥೆ ಹೊಮದಿದ್ದು, ಮೂರು ತಾಸುಗಳಲ್ಲಿ ತಪಾಸಣಾ ವರದಿ ಲಭ್ಯವಾಗುತ್ತಿದೆ.
ರಾಜ್ಯದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೆ. 15ರಂದು ಬೆಳಗ್ಗೆ 11ಕ್ಕೆ ಸಚಿವ ಮಹಮ್ಮದ್ ರಿಯಾಸ್ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಆಯೋಜಿಸಲಾಗಿದೆ.