ಕಾಸರಗೋಡು: ಉಪ್ಪಳದ ಹಿದಾಯತ್‍ನಗರದಲ್ಲಿ ಗಸ್ತಿನಲ್ಲಿದ್ದ ಮಂಜೇಶ್ವರ ಠಾಣೆ ಎಸ್.ಐ ನೇತೃತ್ವದ ಪೊಲೀಸರ ತಂಡವನ್ನು ಥಳಿಸಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮುಸ್ಲಿಂಲೀಗ್ ಮುಖಂಡ, ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಗೋಲ್ಡನ್ ಅಬ್ದುಲ್ ರಹಮಾನ್‍ಗೆ ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ(ದ್ವಿತೀಯ) ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿದೆ.
ಆರೋಪಿಯ ಪಾಸ್‍ಪೋರ್ಟ್ ನ್ಯಾಯಾಲಯಕ್ಕೆ ಸಮರ್ಪಿಸಬೇಕು, ಇಬ್ಬರು ವ್ಯಕ್ತಿಗಳನ್ನೊಳಗೊಂಡ ಒಂದು ಲಕ್ಷ ರೂ. ಮೊತ್ತದ ಬಾಂಡ್ ಒಳಗೊಂಡ ಮುಚ್ಚಳಿಕೆಯೊಂದಿಗೆ ಜಾಮೀನು ಮಂಜೂರುಗೊಳಿಸಲಾಗಿದೆ. ಪ್ರಕರಣದಲ್ಲಿ ಐದು ಮಂದಿ ಆರೋಪಿಗಳಿದ್ದು, ಇವರಲ್ಲಿ ಒಬ್ಬ ವಿದೇಶಕ್ಕೆ ಹಾಗೂ ಇತರ ಮೂವರು ಮುಂಬೈಗೆ ಪರಾರಿಯಾಗಿದ್ದಾರೆ. ವಿದೇಶಕ್ಕೆ ಪರಾರಿಯಾಗಿರುವ ವ್ಯಕ್ತಿಯ ಲುಕೌಟ್ ನೋಟೀಸು ಜಾರಿಗೊಳಿಸಿದ್ದಾರೆ. ತಂಡ ನಡೆಸಿದ ಹಲ್ಲೆಯಿಂದ ಎಸ್.ಐ ಅನೂಪ್, ಸೀನಿಯರ್ ಪೊಲೀಸ್ ಅಧಿಕಾರಿ ಕಿಶೋರ್ ಅವರಿಗೂ ಗಾಯಗಳುಂಟಾಗಿತ್ತು.