ಮಲಯಾಳಂ ಸೂಪರ್‌ಸ್ಟಾರ್ ಮಮ್ಮೂಟಿ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಖ್ಯಾತಿ 'ಭ್ರಮಯುಗಂ'ಗೆ ಸಲ್ಲುತ್ತದೆ. 400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ 72 ವರ್ಷದ ಮಮ್ಮೂಟಿ ನಾಯಕರಾಗಿ ನಟಿಸಿದ್ದ 'ಕಣ್ಣೂರ್ ಸ್ಕ್ವಾಡ್', ಕಳೆದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿ ಬಾಕ್ಸಾಫೀಸಿನಲ್ಲಿ ಗೆಲುವು ದಾಖಲಿಸಿತ್ತು.
ಅದರ ಬೆನ್ನಲ್ಲೇ ಅವರು 'ಭ್ರಮಯುಗಂ'ನಲ್ಲಿ ಬಿಜಿಯಾಗಿದ್ದು, ಈಗಾಗಲೇ ಅವರ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.
'ರೆಡ್ ರೈನ್' ಮತ್ತು 'ಭೂತಕಾಲಂ' ಖ್ಯಾತಿಯ ರಾಹುಲ್ ಸದಾಶಿವನ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದ್ದು, ಕಳೆದ ಅ. 17ರಂದು ಚಿತ್ರೀಕರಣ ಪ್ರಾರಂಭಿಸಲಾಗಿತ್ತು. ಕೇವಲ ಒಂದು ತಿಂಗಳಲ್ಲಿ ಮಮ್ಮೂಟಿ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಅ. 18ರಂದು ಚಿತ್ರತಂಡ ಶೂಟಿಂಗ್ ಪೂರ್ಣಗೊಳಿಸಿ ಕುಂಬಳಕಾಯಿ ಒಡೆದಿದೆ. ಈ ಚಿತ್ರದ ಮೂಲಕ ರಾಹುಲ್ ಸದಾಶಿವನ್ ಕೇರಳದ ಕರಾಳ ಯುಗದ ಕಥೆ ಹೇಳುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ.
ಮಮ್ಮೂಟಿ ಜತೆ ಚಿತ್ರದಲ್ಲಿ ಅರ್ಜುನ್ ಅಶೋಕನ್, ಸಿದ್ಧಾರ್ಥ್ ಭರತನ್, ಅಮಲ್ಡಾ ಲಿಜ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಮುಂದಿನ ವರ್ಷದ ಪ್ರಾರಂಭದಲ್ಲಿ ಮಲಯಾಳಂ, ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ.