ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಗರಣದಲ್ಲಿ ಲಾಭ ಪಡೆದುಕೊಂಡಿದೆ ಎನ್ನಲಾಗಿರುವ ರಾಜಕೀಯ ಪಕ್ಷವನ್ನು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಆರೋಪಿ ಸ್ಥಾನದಲ್ಲಿ ಏಕೆ ನಿಲ್ಲಿಸಿಲ್ಲ ಎಂದು ಸುಪ್ರೀಂ ಕೋರ್ಟ್, ಜಾರಿ ನಿರ್ದೇಶನಾಲಯವನ್ನು (ಇ.ಡಿ) ಬುಧವಾರ ಪ್ರಶ್ನಿಸಿದೆ.
0
samarasasudhi
ಅಕ್ಟೋಬರ್ 05, 2023
ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಗರಣದಲ್ಲಿ ಲಾಭ ಪಡೆದುಕೊಂಡಿದೆ ಎನ್ನಲಾಗಿರುವ ರಾಜಕೀಯ ಪಕ್ಷವನ್ನು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಆರೋಪಿ ಸ್ಥಾನದಲ್ಲಿ ಏಕೆ ನಿಲ್ಲಿಸಿಲ್ಲ ಎಂದು ಸುಪ್ರೀಂ ಕೋರ್ಟ್, ಜಾರಿ ನಿರ್ದೇಶನಾಲಯವನ್ನು (ಇ.ಡಿ) ಬುಧವಾರ ಪ್ರಶ್ನಿಸಿದೆ.
ಎಎಪಿ ನಾಯಕ ಮತ್ತು ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕೋರ್ಟ್ ಈ ಪ್ರಶ್ನೆ ಎತ್ತಿದೆ. ದೆಹಲಿ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಅದರ ಅನುಷ್ಠಾನದಲ್ಲಿನ ಅಕ್ರಮಗಳಲ್ಲಿ ಸಿಸೋಡಿಯಾ ಅವರು ಹಣದ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ, ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಇದೆ. ಈ ಅಬಕಾರಿ ನೀತಿಯನ್ನು ಈಗ ರದ್ದು ಮಾಡಲಾಗಿದೆ.
ಹಣವು ಒಂದು ರಾಜಕೀಯ ಪಕ್ಷಕ್ಕೆ ಸಂದಿದೆ ಎಂಬುದು ಇಡೀ ಪ್ರಕರಣದ ತಿರುಳು. ಆದರೆ ಆ ರಾಜಕೀಯ ಪಕ್ಷವು ಈಗಲೂ ಆರೋಪಿ ಆಗಿಲ್ಲದಿರುವುದು ಏಕೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ.ಎನ್. ಭಟ್ಟಿ ಅವರಿದ್ದ ಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರನ್ನು ಪ್ರಶ್ನಿಸಿತು. ರಾಜು ಅವರು ಇ.ಡಿ. ಮತ್ತು ಸಿಬಿಐ ಪರ ಹಾಜರಾಗುತ್ತಿದ್ದಾರೆ.
ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಪಿತೂರಿ ನಡೆದಿದೆ. ವಿಜಯ್ ನಾಯರ್ ಹಾಗೂ ಇತರ ಕೆಲವರು ಸಮನ್ವಯಕಾರರಾಗಿ ಕೆಲಸ ಮಾಡಿದ್ದಾರೆ. ಸಗಟು ವರ್ತಕರಿಗೆ ಭಾರಿ ಪ್ರಮಾಣದ ಲಾಭವನ್ನು ಮಾಡಿಕೊಡಲು ಪಿತೂರಿ ರೂಪಿಸಲಾಗಿದೆ ಎಂದು ಇ.ಡಿ. ಆರೋಪಿಸಿದೆ. ನಾಯರ್ ಅವರು ಸಿಸೋಡಿಯಾ ಅವರ ನಿಕಟವರ್ತಿ ಎಂದು ಆರೋಪಿಸಲಾಗಿದೆ.
ನಾಯರ್ ಅವರು ಸಿಸೋಡಿಯಾ ಅವರ ಏಜೆಂಟ್ ಎಂಬುದನ್ನು ಸಾಬೀತು ಮಾಡಲು ಯಾವ ಆಧಾರವೂ ಇಲ್ಲ, ಸಿಸೋಡಿಯಾ ವಿರುದ್ಧ ನಿರ್ದಿಷ್ಟವಾಗಿ ಯಾವ ಆರೋಪವೂ ಇಲ್ಲ. ಅವರು ಈ ಅಪರಾಧದಲ್ಲಿ ನೆರವಾಗಿದ್ದಾರೆ ಎಂಬ ಅಸ್ಪಷ್ಟ ಆರೋಪ ಮಾತ್ರ ಇದೆ. ಆದರೆ, ಅವರು ಹಣ ಪಡೆದಿದ್ದಾರೆ ಎಂಬುದಕ್ಕೆ ಆಧಾರ ಇಲ್ಲ ಎಂದು ಸಿಸೋಡಿಯಾ ಪರವಾಗಿ ಹಿರಿಯ ವಕೀಲ ಎ.ಎಂ. ಸಿಂಘ್ವಿ ವಾದಿಸಿದರು. ಸಿಸೋಡಿಯಾ ಅವರನ್ನು ಫೆಬ್ರುವರಿ 26ರಂದು ಬಂಧಿಸಲಾಗಿದೆ.