ಕಾಸರಗೋಡು: ರಾಜಾಶ್ರಯದೊಂದಿಗೆ ಬೆಳೆದುಬಂದಿರುವ ಸಂಗೀತ ಕಲೆಗಳಿಗೆ ಇಂದು ಸಂಘ ಸಂಸ್ಥೆಗಳು ಆಶ್ರಯ ಒದಗಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂಬುದಾಗಿ ಗಾನ ಪ್ರವೀಣ, ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ತಿಳಿಸಿದ್ದಾರೆ.
ಅವರು ರಂಗಚಿನ್ನಾರಿ ಕಾಸರಗೋಡು ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ರಂಗಚಿನ್ನಾರಿ ಸಂಗೀತಘಟಕ ಸ್ವರಚಿನ್ನಾರಿ ಏರ್ಪಡಿಸುವ ಖ್ಯಾತ ಸಂಗೀತ ನಿರ್ದೇಶಕ, ಅಂತಾರಾಷ್ಟ್ರೀಯ ಖ್ಯತಿಯ ಮೆಂಡೋಲಿನ್ ವಾದಕ ಎನ್.ಎಸ್ ಪ್ರಸಾದ್ ನೇತೃತ್ವದಲ್ಲಿ ಸ್ವರ ಸಂಗೀತ ಶಿಬಿರ 'ಸ್ವರ ಸಂಚಾರ'ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಆಯೋಜಿಸಲಾಗಿದ್ದ ಕನ್ನಡ ಹೋರಾಟಗಾರ, ಕವಿ ಎಂ. ಗಂಗಾಧರ ಭಟ್ ಅವರ ಸಂಸ್ಮರಣಾ ಸಮಾರಂಭದಲ್ಲಿ ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಸಂಸ್ಮರನಾ ಭಾಷಣ ಮಾಡಿ, ಪತ್ರಕರ್ತರಾಗಿ, ಕವಿಯಾಗಿ, ಕಾಸರಗೋಡಿನಲ್ಲಿ ಕನ್ನಡದ ಹೋರಾಟದ ಕಿಚ್ಚನ್ನು ಸದಾ ಹಸಿರಾಗಿರಿಸಿದ ಕೀರ್ತಿ ಗಂಗಾಧರ ಭಟ್ ಅವರಿಗೆ ಸಲ್ಲುತ್ತದೆ, ಜತೆಗೆ ನವ್ಯ ಸಾಹಿತ್ಯದ ಮೂಲಕ ಸಾಹಿತ್ಯ ಲೋಕವನ್ನೂ ಬೆಳಗಿಸಿದ್ದಾರೆ ಎಂದು ತಿಳಿಸಿದರು.
ಮಣಿಪಾಲ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕಿ ವಿದುಷಿ ಉಮಾಶಂಕರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಖ್ಯಾತ ಮ್ಯಾಂಡೋಲಿನ್ ವಾದಕ, ಸಂಗೀತ ನಿದೇಸಕ ಎಸ್.ಎನ್ ಪ್ರಸಾದ್, ಸ್ವರಚಿನ್ನಾರಿ ಕಾರ್ಯಾಧ್ಯಕ್ಷ ಪುರುಷೋತ್ತಮ ಕೊಪ್ಪಳ್ ಉಪಸ್ಥಿತರಿದ್ದರು. ಜತೆಕಾರ್ಯದರ್ಶಿ ಪ್ರತಿಜ್ಞಾ ರಂಜಿತ್ ಕಾರ್ಯಕ್ರಮ ನಿರೂಪಿಸಿದರು. ಸ್ವರಚಿನ್ನಾರಿ ಕಾರ್ಯದರ್ಶಿ ಕಿಶೋರ್ ಪೆರ್ಲ ವಂದಿಸಿದರು. ಈ ಸಂದರ್ಭ ಸಂಗೀತ ಸ್ವರಗಳ ಕಲಿಕೆಯ ಬಗ್ಗೆ ಎಸ್.ಎನ್ ಪ್ರಸಾದ್ ಸಿಬಿರಾರ್ಥಿಗಳಿಗೆ ತರಗತಿ ನಡೆಸಿಕೊಟ್ಟರು.





