ತಿರುವನಂತಪುರ: ಅಕಾಡೆಮಿಕ್ ಯೋಗ್ಯತೆಯ ಮಾನದಂಡಗಳನ್ನು ನಿರ್ಣಯಿಸಲು ಬ್ಯಾಂಕ್ ಗಳಿಗೆ ಅಧಿಕಾರವಿಲ್ಲ ಹಾಗೂ ಈ ಹಿನ್ನೆಲೆಯಲ್ಲಿ ಕಲಿಕೆಗಾಗಿ ಸಾಲ ನೀಡುವಾಗ ಇಂತಹ ಮಾನದಂಡ ಹೇರುವುದನ್ನು ಪುನರಾವರ್ತಿಸಬಾರದೆಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಡ್ವ. ಎ.ಎ. ರಶೀದ್ ಸೂಚಿಸಿದ್ದಾರೆ. ವೆಲ್ಲಾಡು ಕಲರಿಕಲ್ ಮನೆಯ ಕೆ.ಜೆ.ಟೈಟಸ್ ಎಂಬವರು ಕೇರಳ ಗ್ರಾಮೀಣ ಬ್ಯಾಂಕ್ ಕರುವಾಂಚಲ್ ಶಾಖಾ ವ್ಯವಸ್ಥಾಪಕರ ವಿರುದ್ದ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಆಯೋಗದ ಶಿಫಾರಸು ಮಾಡಲಾಗಿದೆ.
ಅಂಕಗಳ ಆಧಾರದ ಮೇಲೆ ಗ್ರಾಮೀಣ ಬ್ಯಾಂಕ್ ತನ್ನ ಮಗಳಿಗೆ ಶಿಕ್ಷಣ ಸಾಲವನ್ನು ನಿರಾಕರಿಸಿದ ವಿರುದ್ಧ ಟೈಟಸ್ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆಯೋಗವು ದೂರನ್ನು ಪರಿಗಣಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕರಿಂದ ವಿವರಣೆ ಕೇಳಿತ್ತು. ಶೇ.60 ಅಂಕಗಳಿಲ್ಲದ ಕಾರಣ ಸಾಲ ನೀಡಲು ಸಾಧ್ಯವಾಗಿಲ್ಲ ಎಂಬುದು ಬ್ಯಾಂಕ್ ನ ಉತ್ತರವಾಗಿತ್ತು. ಉನ್ನತ ಶಿಕ್ಷಣಕ್ಕಾಗಿ ಇತರ ರಾಜ್ಯಗಳ ಸಂಸ್ಥೆಗಳಲ್ಲಿ ಮತ್ತು ರಾಜ್ಯದೊಳಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲದ ಅರ್ಜಿಗಳ ಮೇಲೆ ಬ್ಯಾಂಕ್ ಕಾನೂನುಬಾಹಿರ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಆಯೋಗವು ಗಮನಿಸಿದೆ.
ಕಲೆಕ್ಟರೇಟ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 13 ದೂರುಗಳನ್ನು ಆಯೋಗ ಪರಿಗಣಿಸಿದೆ. ಎಂಟು ದೂರುಗಳನ್ನು ಪರಿಹರಿಸಲಾಗಿದೆ. ಆಯೋಗದ ಅಧ್ಯಕ್ಷರ ಜೊತೆಗೆ ಸದಸ್ಯರಾದ ಪಿ. ರೋಸಾ, ಎ. ಸೈಫುದ್ದೀನ್ ಭಾಗವಹಿಸಿದ್ದರು.

.jpeg)
