ಕಾಸರಗೋಡು: ಕೇರಳದ ರೈಲುಗಳನ್ನು ಕೇಂದ್ರೀಕರಿಸಿ ಚಿನ್ನಾಭರಣ ಕಳವು ನಡೆಸುತ್ತಿದ್ದ ಹೈಟೆಕ್ ಕಳ್ಳರ ತಂಡದ ಇಬ್ಬರನ್ನು ರೈಲ್ವೆ ಭದ್ರತಾ ಪಡೆ (ಆರ್‍ಪಿಎಫ್)ಬಂಧಿಸಿದೆ. ಉತ್ತರಪ್ರದೇಶ ನಿವಾಸಿಗಳಾದ ಅಭಯ್‍ರಾಜ್‍ಸಿಂಗ್(26) ಮತ್ತು ಹರಿಶಂಕರ್ ಗಿರಿ(25)ಬಂಧಿತರು. ಇವರ ಬ್ಯಾಗಿನಿಂದ ಕಳವುಗೈದಿದ್ದಾರೆನ್ನಲಾದ 16ಪವನು ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ನಿಜಾಮುದ್ದೀನ್ ಎಕ್ಸ್‍ಪ್ರೆಸ್ ರಐಲಿನಲ್ಲಿ ಸೆ. 2ರಂದು ಪ್ರಯಾಣಿಸುತ್ತಿದ್ದ ಯುವತಿಯ ಚಿನ್ನದ ಕಾಲ್ಗೆಜ್ಜೆ ಕಳವುಗೈಯಲಾಗಿತ್ತು. ಇದಾದ ಮರುದಿನ ಓಗಾ ಎಕ್ಸ್‍ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎರ್ನಾಕುಳಂ ನಿವಾಸಿ ಯುವತಿಯೊಬ್ಬರ ಚಿನ್ನದ ಕಾಲ್ಗೆಜ್ಜೆ ಕಳವಾಗಿತ್ತು. ಶಂಕಿತ ಕಳ್ಳರ ಬಗ್ಗೆ ಯುವತಿ ನೀಡಿದ ಮಾಹಿತಿಯನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿ, ರೈಲ್ವೆ ನಿಲ್ದಾಣಗಳ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಇಬ್ಬರನ್ನೂ ಬಂಧಿಸಿದ್ದಾರೆ.
ವಿಮಾನದಲ್ಲಿ ಸಂಚಾರ:
ಉತ್ತರ ಪ್ರದೇಶದಿಂದ ವಿಮಾನದಲ್ಲೇ ಆಗಮಿಸಿ ಕಳವುಗೈದು ಮತ್ತೆ ವಿಮಾನದಲ್ಲೇ ವಾಪಸಾಗುತ್ತಿದ್ದರು. ಉತ್ತರಪ್ರದೇಶದಿಂದ ವಿಮಾನದಲ್ಲಿ ಗೋವಾ ಬಂದಿಳಿಯುವ ತಂಡ, ಅಲ್ಲಿಂದ ರೈಲನ್ನೇರುತ್ತದೆ. ಅತಿ ಚಾಣಾಕ್ಷ ರೀತಿಯಲ್ಲಿ ಕಳವು ನಡೆಸುವ ತಂಡ ಮತ್ತೆ ಗೋವಾಕ್ಕೆ ರೈಲಲ್ಲಿ ಸಂಚರಿಸಿ, ಅಲ್ಲಿಂದ ಉತ್ತರ ಪ್ರದೇಶಕ್ಕೆ ವಿಮಾನವೇರುತ್ತಿದ್ದರು. ಇವರ ವಿಚಾರಣೆಯಿಂದ ಕಳ್ಳತನದಲ್ಲಿ ತೊಡಗಿರುವ ಇವರ ಸಹಚರರೂ ಸೆರೆಯಾಗುವ ಸಾಧ್ಯತೆಯಿದೆ ಎಂದು ಆರ್‍ಪಿಎಫ್ ಅಧಿಕಾರಿಗಳು ತಿಳಿಸುತ್ತಾರೆ.

