ಬದಿಯಡ್ಕ: ಕಾಸರಗೋಡು ಜಿಲ್ಲೆಯ ನೀರ್ಚಾಲಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಕಾಸರಗೋಡು ಕೃಷಿಕರ ಸಹಕಾರಿ ಮಾರಾಟ ಸಂಘ ನೀರ್ಚಾಲು ಸಂಸ್ಥೆಯು ಕಳೆದ 65 ವರ್ಷಗಳಿಂದ ಕೃಷಿಕರಿಗಾಗಿಯೇ ಕಾರ್ಯಾಚರಿಸುತ್ತಾ ಬಂದಿದೆ. ಈ ಭಾಗದ ಎಲ್ಲಾ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಹಾಗೂ ಕೃಷಿಕ ಸದಸ್ಯರಿಗೆ ಅಗತ್ಯವಿರುವ ಎಲ್ಲಾ ಸೇವೆಗಳನ್ನು ಒದಗಿಸುವ ಧ್ಯೇಯದೊಂದಿಗೆ ಮುನ್ನಡೆಯುತ್ತಿದೆ. ಇದೀಗ ಅಡಿಕೆ ಕೃಷಿಕರ ಅನುಕೂಲಕ್ಕೋಸ್ಕರ ಹಾಗೂ ಗರಿಷ್ಠ ದರ ಲಭಿಸುವಂತೆ ಮಾಡುವ ಉದ್ದೇಶದಿಂದ ಚಾಲಿ ಅಡಿಕೆಯ ಟೆಂಡರು ಖರೀದಿ ವ್ಯವಸ್ಥೆಯನ್ನು ಆರಂಭಿಸಲಾಗುತ್ತಿದೆ. ಈ ನೂತನ ವ್ಯವಸ್ಥೆಯು ಅಕ್ಟೋಬರ್ 21 ಶನಿವಾರ(ಇಂದು) ಆರಂಭಗೊಳ್ಳಲಿದೆ. ಮುಂದೆ ಪ್ರತೀ ಗುರುವಾರದಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ ಟೆಂಡರು ಪ್ರಕ್ರಿಯೆ ನಡೆಯಲಿದೆ. ಅಪರಾಹ್ನ 2 ಕ್ಕೆ ಟೆಂಡರು ದರ ಪ್ರಕಟಗೊಳ್ಳಲಿದೆ. ಆ ದಿನದ ಅತ್ಯುನ್ನತ ದರ ನೀಡುವ ಖರೀದಿದಾರರಿಗೆ ತಮ್ಮ ಟೆಂಡರಿಗೆ ಇರಿಸಿದ ಅಡಿಕೆಯನ್ನು ವಿಕ್ರಯ ಮಾಡುವ ಅಥವಾ ರದ್ದುಗೊಳಿಸುವ ಅಧಿಕಾರಿವು ಸದಸ್ಯನಿಗಿದೆ. ಈ ನೂತನ ಪದ್ಧತಿಯು ಅಡಿಕೆ ಕೃಷಿಕರಿಗೆ ವರದಾನವಾಗಲಿದೆ.
ಸಂಸ್ಥೆಯ ಸೇವೆಗಳು :
ಕ್ಯಾಂಪ್ಕೋದ ಸಹಯೋಗದೊಂದಿಗೆ ಅಡಿಕೆ, ಕಾಳುಮೆಣಸು, ರಬ್ಬರು, ಕೊಕ್ಕೋ, ತೆಂಗಿನ ಕಾಯಿ ಖರೀದಿ ಮಾಡಲಾಗುತ್ತಿದೆ. ಭತ್ತದಿಂದ ಅಕ್ಕಿಯನ್ನು ಮಾಡಿ ಕೊಡುವ ವ್ಯವಸ್ಥೆ, ಗೇರುಬೀಜ, ಬಾಳೆಕಾಯಿ, ತೆಂಗಿನೆಣ್ಣೆ ಮಿಲ್, ಕೊಬ್ಬರಿ ಒಣಗಿಸುವ ಡ್ರೈಯರ್, ಧಾನ್ಯಗಳ ಹುಡಿಮಾಡುವ ಯಂತ್ರ, ಸಾವಯವ, ರಾಸಾಯನಿಕ ಗೊಬ್ಬರಗಳ ಮಾರಾಟ, ಅಡಿಕೆ ಸುಲಿಯುವ ಯಂತ್ರ, ಔಷಧ ಪವರ್ ಸ್ಪ್ರೇಯರ್(ಸಿಂಪರಣೆ) ಬಾಡಿಗೆಗೆ, ತೆಂಗಿನಕಾಯಿ ಕೊಯ್ಲು ಸೇವೆ ಹಲೋನಾರಿಯಲ್ ಮೂಲಕ ಈಗಾಗಲೇ ನಡೆಯುತ್ತಿದೆ. ಈ ಎಲ್ಲಾ ಸೇವೆಗಳನ್ನೂ ಕೃಷಿಕರು ಪಡೆದುಕೊಳ್ಳುತ್ತಿದ್ದಾರೆ.
ಅಭಿಮತ:
ಸದಸ್ಯ ಬೆಳೆಗಾರರಿಗೆ ಸ್ಪರ್ಧಾತ್ಮಕ ಬೆಲೆ ದೊರಕಿಸುವ ವ್ಯವಸ್ಥಿತ ಪಾರದರ್ಶಕ ಪ್ರಯತ್ನಕ್ಕೆ ಇಳಿದಿದ್ದೇವೆ. ಕಾಸರಗೋಡು ಹಾಗೂ ನೆರೆಯ ದಕ್ಷಿಣಕನ್ನಡ ಜಿಲ್ಲೆಯನ್ನು ಹೋಲಿಸಿದರೆ ಇಲ್ಲಿ ಪ್ರಥಮ ಬಾರಿಗೆ ಈ ವ್ಯವಸ್ಥೆ ಜ್ಯಾರಿಗೆ ಬಂದಿದೆ ಎನ್ನಬಹುದು. ಕೃಷಿಕರಿಗೆ ಹಾಗೂ ವ್ಯಾಪಾರಿಗಳಿಗೆ ನೇರಖರೀದಿಗೆ ವ್ಯವಸ್ಥೆ. ಖರೀದಿದಾರರಿಗೆ ಉತ್ತಮ ಗುಣಮಟ್ಟದ ಉತ್ಪನ್ನ ಏಕಕಡೆಯಲ್ಲಿ ಏಕಕಾಲದಲ್ಲಿ ಲಭ್ಯವಾಗಲಿದೆ. ಕೃಷಿಕರಿಗೆ ಸ್ಪರ್ಧಾತ್ಮಕ ದರ ಲಭಿಸುವ ಕಾರಣ ಮಾರುಕಟ್ಟೆಯಿಂದ ಅಧಿಕ ಬೆಲೆ ಲಭಿಸಲು ಸಾಧ್ಯವಿದೆ. ಪ್ರಾರಂಭಿಕ ಹಂತದಲ್ಲಿ ಅಡಿಕೆ ಖರೀದಿಯಿಂದ ಆರಂಭಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಭಾಗದ ಎಲ್ಲಾ ಕೃಷಿ ಉತ್ಪನ್ನಗಳಿಗೂ ಒಂದೇ ಕಡೆ, ಒಂದೇ ಸ್ಥಳದಲ್ಲಿ ವ್ಯವಸ್ಥಿತ ಮಾರುಕಟ್ಟೆ ಒದಗಿಸುವ ಉದ್ದೇಶವಿದೆ.
- ಪದ್ಮರಾಜ ಪಟ್ಟಾಜೆ, ಅಧ್ಯಕ್ಷರು

.jpg)
.jpg)
.jpg)
