ಕಾಸರಗೋಡು: ಆರ್ಥಿಕ ಸಂಕಷ್ಟದಿಂದ ದುರಿತ ಅನುಭವಿಸುತ್ತಿರುವ ಕೇರಳದ ಜನತೆಯನ್ನು ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ನವಕೇರಳ ಸಮಾವೇಶದ ಹೆಸರಲ್ಲಿ ಕೊಳ್ಳೆ ಹೊಡೆಯಲು ಮುಂದಾಗಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ, ವಕೀಲ ಕೆ. ಶ್ರೀಕಾಂತ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಪಿಣರಾಯಿ ವಿಜಯನ್ ನೇತೃತ್ವದ ಸಚಿವ ಸಂಪುಟ ಒಳಗೊಂಡ ಸದಸ್ಯರು ನ. 18ರಿಂದ ಜಿಲ್ಲೆಯಲ್ಲಿ ನಡೆಸಲುದ್ದೇಶಿಸಿರುವ ನವಕೇರಳ ಸಮಾವೇಶ ಕೇವಲ ಚುನಾವಣಾ ಪ್ರಚಾರ ಜಾಥಾ ಆಗಿದ್ದು, ಜನರಿಂದ ಹಣ ಸುಲಿಗೆ ಮಾಡಿ ನಡೆಸುವ ವ್ಯರ್ಥ ಸಮಾವೇಶವಾಗಲಿದೆ. ಇದನ್ನು ಸರ್ಕಾರದ ಕಾರ್ಯಕ್ರಮವಾಗಿ ಬಿಂಬಿಸಲಾಗುತ್ತಿದ್ದು, ಸಮಾವೇಶಕ್ಕಾಗಿ ಸರ್ಕಾರ ಹಣ ಮೀಸಲಿರಿಸದೆ, ಸಾರ್ವಜನಿಕ ಸಂಸ್ಥೆಗಳು, ವ್ಯಾಪಾರಿ ವ್ಯವಸಾಯಿಗಳು, ಜನಸಾಮಾನ್ಯರು ಹಾಗೂ ಮಾಫಿಯಾಗಳಿಂದ ಹಣ ಸಂಗ್ರಹಿಸಲು ಹೊರಟಿರುವುದು ಹಲವು ಸಂಶಯಗಳಿಗೆ ಆಸ್ಪದ ಮಾಡಿಕೊಡುತ್ತಿದೆ. ಕಾರ್ಯಕ್ರಮದ ಒಟ್ಟು ಬಜೆಟ್ ಬಗ್ಗೆ ಸರ್ಕಾರದ ಪ್ರತಿನಿಧಿ ಜಿಲ್ಲಾಧಿಕಾರಿಯಲ್ಲೂ ಮಾಹಿತಿಯಿಲ್ಲ. ಹಣ ವಸೂಲಿಮಾಡಿ, ಅವರಿಗೆ ಸ್ವೀಕೃತಿ ಪತ್ರ ಅಥವಾ ಕೂಪನ್ ನೀಡುವ ವ್ಯವಸ್ಥೆಯೂ ಇಲ್ಲಿಲ್ಲ. ಒಟ್ಟಿನಲ್ಲಿ ಕಾರ್ಯಕ್ರಮ ಹಣ ಸುಲಿಗೆ ಮಾಡುವ ತಂತ್ರವಾಗಿದೆ. ಈ ಮೂಲಕ ಸಿಪಿಎಂ ಜಿಲ್ಲೆಯಲ್ಲಿ ತನ್ನ ಚುನಾವಣಾ ಫಂಡ್‍ಗೆ ಹತ್ತು ಕೋಟಿ ರೂ. ಸಂಗ್ರಹಿಸಿಕೊಳ್ಳಲು ಯೋಜನೆಯಿರಿಸಿಕೊಂಡಿರುವುದಾಗಿ ಆರೋಪಿಸಿದರು.
ಎಡರಂಗ ಸರ್ಕಾರದ ವಂಚನಾ ನೀತಿಯನ್ನು ಜನತೆ ಮನದಟ್ಟಮಾಡಿದ್ದಾರೆ. ಸುಳ್ಳು ಭರವಸೆ ನೀಡಿ ವಂಚಿಸುತ್ತಾ ಬಂದಿರುವ ಸರ್ಕಾರ, ಪ್ರಸಕ್ತ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರೂ ಸೇರಿದಂತೆ ಸಾಮಾಜಿಕ ಪಿಂಚಣಿ ವಿತರಿಸಲೂ ಖಜಾನೆಯಲ್ಲಿ ಹಣವಿಲ್ಲದ ಸ್ಥಿತಿಯಿದೆ. ಈ ಮಧ್ಯೆ ಭಾರಿ ಪ್ರಚಾರದೊಂದಿಗೆ ನಡೆಸಲುದ್ದೇಶಿಸಿರುವ ನವಕೇರಳ ಸಮಾವೇಶಕ್ಕೆ ಜನರ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಕುಟುಂಬಶ್ರೀ, ಉದ್ಯೋಗ ಖಾತ್ರಿ ಯೋಜನೆ ಸದಸ್ಯರನ್ನು ಒತ್ತಡ ಹೇರಿ ಕಾರ್ಯಕ್ರಮಕ್ಕೆ ಕರೆತರಲು ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಭಾನುವಾರದ ರಜಾ ದಿನದಂದು ಸರ್ಕಾರ ವಿಶೇಷ ಆದೇಶದ ಮೂಲಕ ಸರ್ಕಾರಿ ನೌಕರರನ್ನು ಕಡ್ಡಾಯವಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ್ದು, ಇದಕ್ಕೆ ವಿವಿಧ ಸರ್ಕಾರಿ ನೌಕರರ ಸಂಘಟನೆಗಳು ವಿರೋಧ ಸೂಚಿಸಿದೆ. ಸಹಕಾರಿ ಸಂಘಗಳಿಂದಲೂ ಒತ್ತಡ ಹೇರಿ ಹಣ ವಸೂಲಿ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಎಡರಂಗ ಸರ್ಕಾರ ಬಿಕ್ಕಟ್ಟಿನ ಸಂದರ್ಭ ನಡೆಸುತ್ತಿರುವ ಸಮಾವೇಶ ರಾಜ್ಯದ ಜನರನ್ನು ಮತ್ತಷ್ಟು ದುಸ್ಥಿತಿಗೆ ತಳ್ಳಲಿರುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ಕುಮಾರ್ ರೈ, ಮಂಡಲ ಸಮಿತಿ ಅಧ್ಯಕ್ಷೆ ಪ್ರಮಿಳಾ ಮಜಲ್ ಉಪಸ್ಥಿತರಿದ್ದರು.

