HEALTH TIPS

ಲೋಕಸಭೆಯಿಂದ ಉಚ್ಛಾಟನೆ; ಮಹುವಾ ಮೊಯಿತ್ರಾ ಅರ್ಜಿ ವಿಚಾರಣೆಯನ್ನು ಜನವರಿ 3ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

               ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ ಅವರನ್ನು ಸಂಸತ್ತಿನ ಕೆಳಮನೆಯಿಂದ ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮುಂದಿನ ವರ್ಷ ಜನವರಿ 3ಕ್ಕೆ ಮುಂದೂಡಿದೆ.


                ನ್ಯಾಯಮೂರ್ತಿ ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠದಲ್ಲಿ ಒಬ್ಬರಾದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು, ನಾನು ಫೈಲ್‌ಗಳನ್ನು ನೋಡಿಲ್ಲ, ಆದ್ದರಿಂದ ಅದನ್ನು ಪರಿಶೀಲಿಸಲು ಸ್ವಲ್ಪ ಸಮಯ ಬೇಕು ಎಂದು ಹೇಳಿದರು.
'ನಾನು ಫೈಲ್ ಅನ್ನು ಪರಿಶೀಲಿಸಲು ಬಯಸುತ್ತೇನೆ. ನಾವು ಜನವರಿ 3 ರಂದು ಅರ್ಜಿಯ ವಿಚಾರಣೆ ನಡೆಸಬಹುದು' ಎಂದು ಹೇಳಿದರು.

              'ಪ್ರಶ್ನೆ ಕೇಳಲು ನಗದು' ಪ್ರಕರಣದಲ್ಲಿ ತಪ್ಪಿತಸ್ಥರೆಂದು ತೀರ್ಮಾನಿಸಿದ ನೈತಿಕ ಸಮಿತಿಯ ವರದಿಯನ್ನು ಅಂಗೀಕರಿಸಿದ ಲೋಕಸಭೆಯು ಮಹುವಾ ಮೊಯಿತ್ರಾ ಅವರನ್ನು ಸಂಸತ್ ಸದಸ್ಯತ್ವದಿಂದ ಉಚ್ಛಾಟಿಸಿತ್ತು. ಅದಾದ ಮೂರು ದಿನಗಳ ನಂತರ, 49 ವರ್ಷದ ಟಿಎಂಸಿ ನಾಯಕಿ ಮಹುವಾ ಸೋಮವಾರ (ಡಿಸೆಂಬರ್ 11) ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

               ಸಂವಿಧಾನದ ಅಡಿಯಲ್ಲಿ ಒದಗಿಸಲಾದ ತಮ್ಮ ಮೂಲಭೂತ ಹಕ್ಕುಗಳನ್ನು ಒದಗಿಸುವಂತೆ ಕೋರಿರುವ ಮಹುವಾ, ನೈತಿಕ ಸಮಿಯಿಯ ಈ ಕ್ರಮವು ಅನ್ಯಾಯದಿಂದ ಕೂಡಿದೆ ಮತ್ತು ಅನಿಯಂತ್ರಿತವಾಗಿದೆ. ಸಮಿತಿಯು ತನ್ನ ವಿರುದ್ಧದ ತನಿಖೆಯ ಸಮಯದಲ್ಲಿ ತನಗೆ ಸ್ವಾಭಾವಿಕ ನ್ಯಾಯವನ್ನು ನಿರಾಕರಿಸಿದೆ ಎಂದು ಹೇಳಿದ್ದಾರೆ.

              ಅದಾನಿ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿಕೊಂಡು ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಮಹುವಾ ಹಣ ಪಡೆದಿದ್ದಾರೆ ಎನ್ನಲಾಗಿದ್ದು, ಅನಧಿಕೃತ ಜನರಿಗೆ ತನ್ನ ಸಂಸತ್ತಿನ ಲಾಗಿನ್ ಐಡಿಗಳನ್ನು ಹಂಚಿಕೊಂಡಿರುವ ಆರೋಪವೂ ಅವರ ಮೇಲೆ ಕೇಳಿಬಂದಿದೆ.

                  ನೈತಿಕ ಸಮಿತಿಯ ವರದಿಯ ಮೇಲೆ ಸದನದಲ್ಲಿ ಬಿಸಿ ಚರ್ಚೆ ನಡೆಯಿತು. ಈ ಚರ್ಚೆಯ ವೇಳೆ ಮಹುವಾ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಮಹುವಾ ಅವರು ‘ಅನೈತಿಕವಾಗಿ ನಡೆದುಕೊಂಡಿದ್ದಾರೆ’ ಎಂಬ ಕಾರಣಕ್ಕೆ ಅವರನ್ನು ಉಚ್ಚಾಟಿಸಬೇಕು ಎಂಬ ಗೊತ್ತುವಳಿಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಂಡಿಸಿದರು. ಸದನವು ಇದನ್ನು ಧ್ವನಿ ಮತದ ಮೂಲಕ ಅಂಗೀಕರಿಸಿತು. ಬಳಿಕ ಡಿಸೆಂಬರ್ 8ರಂದು ಮಹುವಾ ಅವರನ್ನು ಲೋಕಸಭೆಯಿಂದ ಉಚ್ಛಾಟಿಸಲಾಯಿತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries