ನವದೆಹಲಿ: ಉತ್ತರಪ್ರದೇಶದ ಬಾಂದಾ ಜಿಲ್ಲೆಯ ಮಹಿಳಾ ನ್ಯಾಯಾಧೀಶರೊಬ್ಬರು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆದು ಘನತೆಯಿಂದ ಜೀವ ಕಳೆದುಕೊಳ್ಳಲು ಅನುಮತಿ ಕೋರಿದ್ದಾರೆ. ಜಿಲ್ಲಾ ನ್ಯಾಯಾಧೀಶರೊಬ್ಬರ ವಿರುದ್ಧ ತಾವು ದಾಖಲಿಸಿದ್ದ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ, ಮುಖ್ಯ ನ್ಯಾಯಮೂರ್ತಿಯವರ ಸೂಚನೆ ಮೇರೆಗೆ ಸುಪ್ರೀಂಕೋರ್ಟ್ ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಂಡಿದೆ. ದೂರಿನ ಕುರಿತ ತನಿಖೆ ಯಾವ ಹಂತದಲ್ಲಿದೆ ಎಂಬುದರ ಮಾಹಿತಿ ಒದಗಿಸಲು ಅಲಹಾಬಾದ್ ಹೈಕೋರ್ಟ್‌ಗೆ ಸೂಚಿಸಿದೆ.
ಬಾರಾಬಂಕಿಯಲ್ಲಿದ್ದಾಗ ವೃತ್ತಿ ಜೀವನದಲ್ಲಿ ನಿಂದನೆ ಮತ್ತು ಕಿರುಕುಳ ಅನುಭವಿಸಿದ್ದು ಜೀವ ಕಳೆದುಕೊಳ್ಳಲು ಅನುಮತಿ ನೀಡಬೇಕು ಎಂದು ಎರಡು ಪುಟಗಳ ಪತ್ರದಲ್ಲಿ ನ್ಯಾಯಾಧೀಶೆ ಮನವಿ ಮಾಡಿದ್ದಾರೆ.
'ನನಗೆ ಇನ್ನು ಬದುಕಬೇಕೆಂಬ ಇಚ್ಛೆಯಿಲ್ಲ. ಒಂದೂವರೆ ವರ್ಷದಿಂದ ನಾನು ಜೀವಂತ ಶವದಂತೆ ಆಗಿದ್ದೇನೆ. ಆತ್ಮವಿಲ್ಲದ ಮತ್ತು ನಿರ್ಜೀವ ದೇಹವನ್ನು ಹೊತ್ತು ಸುತ್ತಾಡುವುದರಲ್ಲಿ ಇನ್ನು ಯಾವ ಸಾರ್ಥಕತೆಯೂ ಇಲ್ಲ. ಜೀವನದಲ್ಲೀಗ ನನಗೆ ಯಾವುದೇ ಗುರಿ ಉಳಿದಿಲ್ಲ. ಘನತೆಯಿಂದ ನನ್ನ ಜೀವ ಕೊನೆಗಾಣಿಸಿಕೊಳ್ಳಲು ದಯವಿಟ್ಟು ಅನುಮತಿ ನೀಡಬೇಕು' ಎಂದು ಕೋರಿದ್ದಾರೆ.
ಆಂತರಿಕ ದೂರುಗಳ ಸಮಿತಿ (ಐಸಿಸಿ) ಮುಂದೆ ಇರುವ ದೂರಿನ ವಿಚಾರಣೆಯ ಪ್ರಗತಿ ಬಗ್ಗೆ ಮಾಹಿತಿ ನೀಡುವಂತೆ ಅಲಹಾಬಾದ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಸುಪ್ರೀಂಕೋರ್ಟ್‌ನ ಪ್ರಧಾನ ಕಾರ್ಯದರ್ಶಿಯವರು ಕೇಳಿದ್ದಾರೆ. ಸಿಜೆಐ ಅವರ ಆದೇಶದ ಮೇರೆಗೆ ಮಾಹಿತಿ ಕೇಳಲಾಗಿದೆ.
ಈ ಮೊದಲು ಮಹಿಳಾ ನ್ಯಾಯಾಧೀಶರು ಅರ್ಜಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬಂದಿತ್ತು.
'ಆಂತರಿಕ ದೂರುಗಳ ಸಮಿತಿಗೆ ಈ ವಿಷಯದ ಅರಿವಿದೆ. ಈ ವಿಚಾರವಾಗಿ ನಿರ್ಣಯವನ್ನು ಅಂಗೀಕರಿಸಲಾಗಿದ್ದು, ಅದಕ್ಕೆ ಅಲಹಾಬಾದ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಅನುಮೋದನೆ ಬಾಕಿ ಇದೆ' ಎಂದು ಹೇಳಿದ ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿತ್ತು.