ಕಾಸರಗೋಡು: ಜಿಲ್ಲೆಯ ಹತ್ತು ಹಲವು ದೇವಸ್ಥಾನ,ದೈವಸ್ಥಾನಗಳ ಪುನರುತ್ಥಾನ, ನಿರ್ಮಾಣ, ಬ್ರಹ್ಮಕಲಶೋತ್ಸವ ಸೇರಿದಂತೆ ಧಾರ್ಮಿಕ ಚಟುವಟಿಕೆಗಳಿಗೆ ನೇತೃತ್ವ ನೀಡುತ್ತಿರುವ ಕೆ.ಎನ್. ವೆಂಕಟ್ರಮಣ ಹೊಳ್ಳ ಅವರಿಗೆ ಕಾಸರಗೋಡಿನ ಸೀತಮ್ಮ ಪುರುಷ ನಾಯಕ ಕನ್ನಡ ಭವನದ ವತಿಯಿಂದ ನೀಡಲ್ಪಡುವ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕನ್ನಡ ಭವನದ ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ನಡೆದ ಕೇರಳ ಕರ್ನಾಟಕ ಕನ್ನಡ ಸಂಸ್ಕøತಿ ಉತ್ಸವ 2024ರಲ್ಲಿ ಗಣ್ಯರ ಉಪಸ್ಥಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಕ್ಷಗಾನ ಕ್ಷೇತ್ರದಲ್ಲಿ ತನ್ನ ಸ್ವಂತ ನೆಲೆಗಟ್ಟಿನಲ್ಲಿ ಶ್ರೀವೆಂಕಟ್ರಮಣ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರ ಸ್ಥಾಪಿಸಿ ನೂರಾರು ಆಸಕ್ತರಿಗೆ ತರಬೇತಿ ನೀಡಿ ವೇದಿಕೆ ಕಲ್ಪಿಸುತ್ತಿರುವ ಇವರ ನೇತೃತ್ವದಲ್ಲಿ 48ಕ್ಕೂ ಅಧಿಕ ಭಜನಾ ಸಂಕೀರ್ತನ ಕಮ್ಮಟ, ಮದ್ಯ ವರ್ಜನ ಶಿಬಿರ, ಶಾಲೆಗಳ ಅಭಿವೃದ್ಧಿ, ಕಲಿಕಾ ಪರಿಕರಗಳ ಪೂರೈಕೆ, ಶ್ರಮದಾನದಂತಹ ಶೈಕ್ಷಣಿಕ,ಧಾರ್ಮಿಕ,ಸಾಮಾಜಿಕ ಸೇವೆಯ ಕನ್ನಡ ಸಾಹಿತ್ಯ ಸಂಸ್ಕೃತಿ ಧಾರ್ಮಿಕ ನೆಲೆಯನ್ನು ಕಾಸರಗೋಡಿನಲ್ಲಿ ನೆಲೆ ನಿಲ್ಲಿಸಲು ಅಹರ್ನಿಶಿ ದುಡಿಯುತ್ತಿರುವುದಕ್ಕೆ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಮಾರಂಭದಲ್ಲಿ ಕಥಾ ಬಿಂದುವಿನ ಮುಖ್ಯುಸ್ಥ ಪಿ.ವಿ.ಪ್ರದೀಪ್ ಕುಮಾರ್, ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ, ಕರ್ನಾಟಕ ಜಾನಪದ ಪರಷತ್ತು ಕೇರಳ ರಾಜ್ಯ ಘಟಕ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಸಾಹಿತಿ ಕೊಳ್ಚಪ್ಪೆ ಗೋವಿಂದ ಭಟ್ ಕನ್ನಡ ಭವನದ ರೂವಾರಿ ವಾಮನ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.


