ಕಾಸರಗೋಡು: ಬಾಟಲಿ ನೀರಿನ ಗುಣಮಟ್ಟ ಮತ್ತು ನೀರಿನ ಬಳಕೆಯ ಕಾಲಾವಧಿಯನ್ನು ಪರಿಶೀಲಿಸಲಾಗುವುದು. ಈ ಬಗ್ಗೆ ನಾಗರಿಕ ಪಊರೈಕೆ ಇಲಾಖೆ ಅಧಿಕಾರಿಗಳಿಗೆ ಅಗತ್ಯ ನಿರ್ದೇಶ ನೀಡಲಿರುವುದಾಗಿ ಆಹಾರ ಆಯೋಗದ ಸದಸ್ಯೆ ಎಂ.ವಿಜಯಲಕ್ಷ್ಮಿ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಎನ್‍ಎಫ್‍ಎಸ್‍ಎ ವಿಜಿಲೆನ್ಸ್ ಸಮಿತಿ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದರು. ಬಾಟಲಿಗಳಲ್ಲಿ ಪೂರೈಸುವ ಕುಡಿಯುವ ನೀರಿನ ಬಳಕೆ ಕಾಲಾವಧಿ ಮತ್ತು ಅದರ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತಾ ಇಲಾಖೆಗೆ ಈಗಾಗಲೇ ನಿರ್ದೇಶಿಸಲಾಗಿದ್ದು, ರಸ್ತೆ ಬದಿ ತೆರೆದ ಪ್ರದೇಶಗಳಲ್ಲಿ, ಅಂಗಡಿಗಳಲ್ಲಿ ವಿತರಿಸುವ ಆಹಾರ ವಸ್ತುಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಸರಬರಾಜು ಅಧಿಕಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಅನಧಿಕೃತವಾಘಿ ವಿನಿಗರ್ ಉತ್ಪಾದನೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಒತ್ತಾಯಿಸಿದರು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ)ಕೆ.ವಿ.ಶ್ರುತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ಎಂ.ಜುಲ್ಫಿಕರ್, ತಾಲೂಕು ಅಧಿಕಾರಿಗಳಾದ ಟಿ.ಸಿ.ಸಜೀವನ್, ಕೆ.ವಿ.ದಿನೇಶನ್, ಎಂ.ಗಂಗಾಧರ ಹಾಗೂ ಸಮಿತಿ ಸದಸ್ಯ ಚಂದ್ರನ್ ಆರಂಗಡಿ ಹಾಗೂ ರಾಷ್ಟ್ರೀಯ ಪಕ್ಷದ ಪ್ರತಿನಿಧಿ ಎಂ.ಕುಞಂಬು ನಂಬಿಯಾರ್ ಉಪಸ್ಥಿತರಿದ್ದರು.




