ಕಾಸರಗೋಡು: ಬಿಪಿಎಲ್ ಹಾಗೂ ಅಂತ್ಯೋದಯ ಅನ್ನ ಯೋಜನೆ(ಎಎವೈ)ರೇಶನ್ ಕಾರ್ಡುಗಳ ಮಸ್ಟರಿಂಗ್ ಪ್ರಕ್ರಿಯೆ ಶುಕ್ರವಾರ ಆರಂಭಗೊಂಡಿದ್ದು, ಸರ್ವರ್ ಸಮಸ್ಯೆ ಎದುರಾಗಿ ಜನರು ರೇಶನ್ ಅಂಗಡಿ ಎದುರು ಕಾಯುವ ಸ್ಥಿತಿ ನಿರ್ಮಾಣಗೊಂಡಿತು.
ಮಾ. 15ರಿಂದ 17ರ ವರೆಗೆ ಬಿಪಿಎಲ್, ಎಎವೈ ಕಾರ್ಡುದಾರರು ಕಡ್ಡಾಯವಾಗಿ ಮಸ್ಟರಿಂಗ್ ನಡೆಸಬೇಕಾಗಿದ್ದು, ಇದಕ್ಕಾಗಿ ಶುಕ್ರವಾರ ಬೆಳಗ್ಗಿನಿಂದಲೇ ರೇಶನ್‍ಕಾರ್ಡುದಾರರು ಅಂಗಡಿ ಎದುರು ಸಾಲುಗಟ್ಟಿ ನಿಂತಿದ್ದರು. ವಿವಿಧ ಕೆಲಸಕ್ಕಾಗಿ ತೆರಳುವವರು, ವಿದ್ಯಾರ್ಥಿಗಳು, ರಂಜಾನ್ ವ್ರತಧಾರಿಗಳು ಮಸ್ಟರಿಂಗ್ ನಡೆಸಲು ಅಂಗಡಿ ಎದುರು ಸಾಲುನಿಂತು ಸರ್ವರ್ ಸರಿಯಾಗುವುದನ್ನು ಎದುರುನೋಡುತ್ತಿದ್ದರು. ಬಹುತೇಕ ಕಡೆ ಸರ್ವರ್ ಸಮಸ್ಯೆ ಕಾಡಿದ್ದು, ಕೆಲವೆಡೆ ಮಧ್ಯಾಹ್ನದ ವೇಳೆಗೆ ಸರಿಯಾದರೂ, ಇನ್ನು ಕೆಲವೆಡೆ ಸರ್ವರ್ ಆಗಾಗ ಕೈಕೊಡುತ್ತಿತ್ತು.
ರಾಜ್ಯಾದ್ಯಂತ ಇ-ಪೋಸ್ ಸಲಕರಣೆ ಮೂಲಕ ಪಡಿತರ ಸಾಮಗ್ರಿ ವಿತರಿಸಲಗುತ್ತಿದ್ದು, ಕಳೆದ ಎರಡು ವಾರದಿಂದ ರಾಜ್ಯಾದ್ಯಂತ ಸರ್ವರ್ ಸಮಸ್ಯೆ ಕಾಡಲಾರಮಬಿಸಿದೆ. ಈ ನಿಟ್ಟಿನಲ್ಲಿ ರೇಶನಿಂಗ್ ವ್ಯವಸ್ಥೆಯನ್ನು ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನ ವರೆಗೂ, ಇನ್ನು ಕೆಲವೆಡೆ ಮಧ್ಯಾಹ್ನ ನಂತರವೂ ತೆರೆಯುವ ಮೂಲಕ ಕ್ರಮೀಕರಿಸಲಾಗಿತ್ತು.

